ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಹಾಗೂ ಅವರ ಸಹೋದರ ದೀಪಕ್ ಸೇರಿದಂತೆ ನಾಲ್ಕು ಜನರ ಕೊಲೆಗೆ ಸ್ಕೆಚ್ ಹಾಕಿದ್ದ 7 ಜನ ಆರೋಪಿಗಳನ್ನು ಜಯನಗರ ಪೊಲೀಸರು ಮೊನ್ನೆ (ಡಿಸೆಂಬರ್ 19) ವಶಕ್ಕೆ ಪಡೆದಿದ್ದಾರೆ.
ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ ಮಂಜುನಾಥ್ ಹಾಗೂ ಅವನ ಸಹಚರರು ಸ್ಕೆಚ್ ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸುಳಿವು ಸಿಕ್ಕ ಕೂಡಲೇ ದಾಳಿ ಮಾಡಿದ್ದ ಜಯನಗರ ಪೊಲೀಸರು ಸದ್ಯ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ, ಸಹಚರ ಬೇಕರಿ ರಘು, ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಕೊಲೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗ್ತಿದೆ.
ಖಚಿತ ಮಾಹಿತಿ ಮೇರೆಗೆ ಮಾಹಿತಿ ಪಡೆದ ಜಯನಗರ ಪೊಲೀಸರು ರೌಡಿ ಶೀಟರ್ ಭರತ್ ಕುಮಾರ್ ಸೇರಿ 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ಜಯನಗರ ಪೊಲೀಸರಿಂದ ಎಫ್ ಐ ಆರ್ ದಾಖಲಾಗಿದೆ.