ಮಂಡ್ಯ: ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ರು. ಅಲ್ಲದೆ ಪ್ರಚಾರದ ವೇಳೆ ಸುಮಲತಾ ಮತ್ತು ಇತರರ ಮೇಲೆ ಕೆಟ್ಟದಾಗಿ ಮಾತನಾಡಿದವರಿಗೆ ಯಶ್ ಗೂಗ್ಲಿ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ವೇದಿಕೆ ಮೇಲೆ ಬರುತ್ತಿದ್ದಂತೆ,ನಾನು ಅವತ್ತೇ ಹೇಳಿದ್ದೇ 23ನೇ ತಾರೀಕೆ ನೀವು ಅಂಬಿ ಅಣ್ಣನ ಬರ್ತ್ ಡೇ ಗಿಫ್ಟ್ ಕೊಡ್ತೀರಾ ಅಂತ. ಹಾಗೇ ಮಾಡಿದ್ದೀರಾ. ನಿಮಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಅಂತ ತಿಳಿಯುತ್ತಿಲ್ಲ. ನಿಮಗೆ ನಾವು ಸಂಪೂರ್ಣ ಶರಣಾಗಿದ್ದೀವಿ. ಇವತ್ತು ನಿಮ್ಮ ಕೊಡುಗೆಯಿಂದ ಎಲ್ಲರಲ್ಲೂ ಕೃತಜ್ಞತಾ ಭಾವ ಮೂಡಿಸಿದೆ. ಈ ಕಠಿಣ ಹೋರಾಟದಲ್ಲಿ ಸುಮಲತಾರನ್ನು ಗೆಲ್ಲಿಸಿದ್ದೀರಿ. ಅಂಬರೀಶಣ್ಣ ಹೇಳಿದ ಹಾಗೆ ನೀವು ನಿಮ್ಮ ಬೆಲೆ ಏನು ಅಂತ ಇವತ್ತು ತೋರಿಸಿಕೊಟ್ಟಿದ್ದೀರಿ. ಜನರ ಧನಿ ಕೇಳಬೇಕು, ಜನರ ಜೊತೆ ನಾವು ಮನೆ ಮಕ್ಕಳಂತೆ ನಿಂತೆವು ಅಂತ ಯಶ್ ಹೇಳಿದ್ರು.
ಸುಮಕ್ಕ ಜಗತ್ತಿನಲ್ಲಿ ಅತ್ಯಂತ ಕಠಿಣ ಸವಾಲನ್ನು ಎದುರಿಸಿ ಮುಂದೆ ಸಾಗಿದ್ದಾರೆ. ಯಾರೂ ಹುಟ್ಟಿದಾಗಿನಿಂದ ಯಾರೂ ಎಲ್ಲಾ ತಿಳಿದುಕೊಂಡು ಬರೋದಿಲ್ಲ ಅಂತ ಟೀಕೆ ಮಾಡುತ್ತಿದ್ದವರಿಗೆ ಯಶ್ ತಕ್ಕ ಉತ್ತರ ನೀಡಿದ್ರು.
ಇನ್ನು ನೀವು ಹೇಳಿದ ಕೆಲಸ ಮಾಡುವ ಮನಸು ಸುಮಕ್ಕಾರಿಗಿದೆ. ಎಲೆಕ್ಷನ್ ನಲ್ಲಿ ಹೇಗೆ ಅವರು ಗೆದ್ದೇ ಗೆಲ್ತಾರೆ ಅನ್ನೋ ನಂಬಿಕೆ ಇತ್ತೋ , ಹಾಗೇ ಅವರು ಯಾವತ್ತೂ ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ತಾರೆ ನಿಮ್ಮ ಆಶೀರ್ವಾದ ಸದಾ ಇರಲಿ ಅಂದ್ರು.
ನಾವು ಯಾರೂ ಯಾರಿಗೂ ವಿರೋಧಿಗಳಲ್ಲ
ನಮ್ಮ ಪ್ರತಿಸ್ಪರ್ಧಿಗಳಲ್ಲಿ ಒಂದು ಮನವಿ. ನೀವೆಲ್ಲಾ ಒಂದು ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿ, ನಮ್ಮ ಬಗ್ಗೆ ಅವಮಾನ ಮಾಡುವಂತೆ ಮಾತನಾಡಿದ್ರು. ಹೀಗೆ ಮಾಡಿ ನಮಗಾಗಿ ನೀವು ತುಂಬಾನೇ ಜಾಸ್ತಿ ಕೆಲಸ ಮಾಡಿದ್ರಿ. ಇನ್ನು ಮುಂದೆ ಅದೇ ಕೆಲಸ ಮಾಡಬೇಡಿ. ಹೀಗಾಗಿ ಯುದ್ಧ ಆಗಿದೆ ಇನ್ನು ಶಾಂತಿ ಸಾರೋಣ. ಜನರಿಂದಲೇ ಆಯ್ಕೆಯಾದ ನೀವು ಸುಮಕ್ಕಾರ ಬೆಂಬಲಕ್ಕೆ ನಿಂತು ಸಲಹೆ ಸೂಚನೆ ನೀಡಿ ಅಂತ ಮನವಿ ಮಾಡಿಕೊಂಡ್ರು. ಅಲ್ಲದೆ ಇದಾಗಲೇ ಜನ ನಿಮಗೆ ಪಾಠ ಕಲಿಸಿದ್ದಾರೆ. ಇನ್ನೂ ಪಾಠ ಕಲೀಬೇಡಿ ಅಂತ ಯಶ್ ಟಾಂಗ್ ನೀಡಿದ್ರು.
ಸಂಸದರಾದವ್ರು ನಾವು ಕರೆದ ಎಲ್ಲಾ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗಬೇಕೆನ್ನೋ ನಿರೀಕ್ಷೆ ಇಟ್ಟು ಕೊಂಡಿರ್ತಾರೆ. ಒಂದು ವೇಳೆ ಕಾರ್ಯಕ್ರಮಕ್ಕೆ ಬರೋದಕ್ಕೆ ಸಾಧ್ಯವಾಗಲಿಲ್ಲ ಅಂದರೆ ಮುನಿಸಿಕೊಳ್ತಾರೆ. ಆದ್ರೆ ಇದು ತಪ್ಪು, ಅವುಗಳನ್ನೆಲ್ಲಾ ಬಿಟ್ಟು ಬಿಡೋಣ. ಹೀಗೆ ಯಾರೂ ಮಾಡಬಾರದು, ಸಂಸದರು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಯ ಕೊಡಲಿ. ಕ್ಷೇತ್ರದ ಅಭಿವೃದ್ಧಿಗೂ ಸಹ ಸುಮಲತಾರಿಗೆ ಶಕ್ತಿ ತುಂಬಿ ಅಂತ ಯಶ್ ಮನವಿ ಮಾಡಿದ್ರು.
ಹಾಗೇ ಸುಮಕ್ಕಾ ಕ್ಷೇತ್ರದ ಅಭಿವೃದ್ಧಿ ಮಾಡೇ ಮಾಡ್ತಾರೆ ಅನ್ನೋ ಭರವಸೆ ನನಗಿದೆ ಅಂತ ಮತ್ತೆ ಮಂಡ್ಯ ಜನರಿಗೆ ರಾಕಿಂಗ್ ಸ್ಟಾರ್ ಯಶ್ ಕೃತಜ್ಞತೆ ಸಲ್ಲಿಸಿದ್ರು