ರೌಡಿಗಳ ಚಲನ ವಲನದ ಮೇಲೆ ಪೊಲೀಸರು ನಿಗಾ ಇಡುತ್ತಾರೆ. ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೇ ಕಾನೂನು ರೀತಿಯಲ್ಲಿ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಎಸ್ಪಿ ಇಶಾ ಪಂತ್ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಕ್ತಸಿಕ್ತ ಚರಿತ್ರೆ ಸಾರಿದ ಭೀಮಾ ತೀರದಲ್ಲಿ ಪ್ರಥಮ ಬಾರಿಗೆ ಎಸ್ಪಿ ಇಶಾ ಪಂತ್ ರೌಡಿ ಪರೇಡ್ ನಡೆಸುವ ಮೂಲಕ ಪುಡಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ಮುಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಸುಮ್ಮನಿರೋಲ್ಲ. ಜನರಿಗೆ ಹೆದರಿಸೋದು, ಬೆದರಿಸೋದು, ಹಣ ವಸೂಲಿ ಮಾಡೋದು ಸೇರಿದಂತೆ ಕಾನೂನು ವಿರೋಧಿ ಚಟುವಟಿಕೆ ನಡೆಸಿದರೆ ಪರಿಣಾಮ ನೆಟ್ಟಗಿರದು ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಅಫಜಲಪುರ ತಾಲೂಕಿನ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿಗಳನ್ನು ಅಫಜಲಪುರ ಠಾಣೆಗೆ ಕರೆತಂದು ರೌಡಿ ಪರೇಡ್ ನಡೆಸಲಾಯಿತು. ಅಫಜಲಪುರ ಠಾಣೆಯ 222 ರೌಡಿ ಶೀಟರ್ಸ್, ದೇವಲ್ ಗಾಣಗಾಪೂರ್ ಠಾಣೆಯ 110, ರೇವೂರ್ ಠಾಣೆಯ 31 ರೌಡಿಗಳು ಪರೇಡ್‌ನಲ್ಲಿದ್ದರು.
ರೌಡಿಗಳು ಎಂದಾಕ್ಷಣ ಎಲ್ಲವೂ ನಿಮ್ಮ ಕೈಯಲ್ಲಿಲ್ಲ. ರೌಡಿಗಳ ಚಲನವಲನದ ಮೇಲೆ ಪೊಲೀಸರು ನಿಗಾ ಇಡುತ್ತಾರೆ. ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೇ ಕಾನೂನು ರೀತಿಯಲ್ಲಿ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಎಸ್ಪಿ ಪಂತ್ ಖಡಕ್ ವಾರ್ನಿಂಗ್ ನೀಡಿದರು. ಇದೇ ವೇಳೆ ಸಮಾಜಘಾತುಕ ಕೆಲಸ ಬಿಟ್ಟು ಉತ್ತಮ ನಾಗರಿಕರಾಗುವಂತೆ ಸಲಹೆ ನೀಡಿದರು. ಕೊಲೆ, ಸುಲಿಗೆ, ಜನಸಾಮಾನ್ಯರನ್ನು ಹೆದರಿಸೋದು, ದುಡ್ಡಿನ ವ್ಯವಹಾರ, ಹಣಕ್ಕಾಗಿ ಭೂಮಿ ಸೇರಿದಂತೆ ಬೇರೆ ಬೇರೆ ವ್ಯಾಜ್ಯಗಳಲ್ಲಿ ಜನರಿಗೆ ತೊಂದರೆ ಕೊಡೋದು, ಅಕ್ರಮ ಮರಳು ಸಾಗಣೆ ದಂಧೆ ಮಾಡೋದು ಗಮನಕ್ಕೆ ಬಂದಿದೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿಸಿಕೊಂಡು ಸಾರ್ವಜನಿಕರು ಠಾಣೆಗೆ ಬಂದು ದೂರು ಕೊಡದಂತೆ ಹೆದರಿಸುವ ಕೆಲಸ ಮಾಡಿತ್ತಿದ್ದಾರೆ ಅಂತವರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಮರಳು ದಂದೆಯಲ್ಲಿ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಎಸ್ಪಿ ಇಶಾ ಪಂತ್, ಇನ್ನಾದರೂ ಅಪರಾಧ ಚಟುವಟಿಕೆ ಬಿಟ್ಟು ಉತ್ತಮ ಜೀವನ ನಡೆಸಿ, ಇಲ್ಲದಿದ್ದರೆ ಗೂಂಡಾ ಕಾಯ್ದೆ, ಕೋಕಾ ಕಾಯ್ದೆ ಹೇರಿ ಗಡಿಪಾರು ಮಾಡುವಂತ ಕಠಿಣ ನಿಲುವಿಗೆ ಪೊಲೀಸ್ ಇಲಾಖೆ ಮುಂದಾಗಲಿದೆ ಎಂದು ತಾಕೀತು ಮಾಡಿದರು.