ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಪುಂಡಾಟ ಹೆಚ್ಚಾಗಿದೆ. ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆಯನ್ನ ನಡೆಸಿ ಆತಂಕ ಮೂಡಿಸಿದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ ಸಮಯ ಸುಮಾರು ಐದು ಗಂಟೆಗಳಲ್ಲಿ ಅಮಲಿನಲ್ಲಿ ಬರೋಬ್ಬರಿ ನಾಲ್ವರ ಮೇಲೆ ದಾಳಿ ನಡೆಸಿದ್ದಾನೆ ಈ ರೌಡಿ ಶೀಟರ್. ಹಲ್ಲೆಗೊಳಗಾದ ನಾಲ್ಕು ಜನರ ಪೈಕಿ ಇಬ್ಬರು ಪಾನಿ ಪುರಿ ವ್ಯಾಪಾರಿಗಳಾಗಿದ್ದರೆ , ಉಳಿದ ಇಬ್ಬರು ಸಾರ್ವಜನಿಕರಾಗಿದ್ದರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ನಾಲ್ವರೂ ಘಟನೆ ಸಂಬಂಧ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. , ಸದ್ಯ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಕೃತ್ಯ ಎಸಗಿದವನನ್ನು ಭಿನ್ನಮಂಗಲ ನಿವಾಸಿ ಕದಂಬ ಅಂತ ಗುರ್ತಿಸಲಾಗಿದೆ.ಆರೋಪಿ ಕದಂಬ ವಿರುದ್ಧ ಪೊಲೀಸರು ಮೂರು ಕೊಲೆ ಯತ್ನ ಪ್ರಕರಣಗಳು ಮತ್ತು ದರೋಡೆ ಪ್ರಕರಣ ದಾಖಲಿಸಿದ್ದಾರೆ.
ಈತ ಈ ಹಿಂದೆ ಕೂಡ ಹಲವು ಹಲ್ಲೆ, ಸುಲಿಗೆ ಕೃತ್ಯಗಳಲ್ಲಿ ತೊಡಗಿದ್ದ ಎಂಬ ಮಾಹಿತಿ ಇದೆ. 2024ರಲ್ಲಿ ಇಂದಿರಾನಗರ ಠಾಣೆಯಲ್ಲಿ ಕದಂಬ ನ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು. ಸದ್ಯ ಈ ಕದಂಬನ ಸರಣಿ ಕೃತ್ಯಗಳು ಇಂದಿರಾನಗರ ಸಾರ್ವಜನಿಕರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ.
ಈತ ಈ ಕೃತ್ಯವನ್ನು ಎಸಗಲು ಮುಖ್ಯ ಕಾರಣ ಇಂದಿರಾನಗರದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಎಂದು ತಿಳಿದು ಬಂದಿದೆ. ಈತ ಸ್ಥಳೀಯರು ಮತ್ತು ಅಂಗಡಿ ಮಾರಾಟಗಾರರನ್ನು ಬೆದರಿಕೆ ಹಾಕ್ತಿ ಕಿರುಕುಳ ಕೊಡುತ್ತಿದ್ದ.
ಇನ್ನು ಈ ದಾಳಿಗೊಳಗಾದ ನಾಲ್ವರನ್ನು ಇಂದಿರಾನಗರದ ಮೋಟಪ್ಪನಪಾಳ್ಯದ ನಿವಾಸಿ ಮತ್ತು ಪ್ರಯಾಗರಾಜ್‌ನ 24 ವರ್ಷದ ದೀಪಕ್ ಕುಮಾರ್ ವರ್ಮಾ, ಇಂದಿರಾನಗರದ ಅಪ್ಪಾ ರೆಡ್ಡಿ ಪಾಳ್ಯದ ನಿವಾಸಿ 44 ವರ್ಷದ ಎಂ. ತಮ್ಮಯ್ಯ, ಮಾಗಡಿ ರಸ್ತೆಯ ಚೋಳರಪಾಳ್ಯದ 24 ವರ್ಷದ ಎ. ಆದಿಲ್ ಮತ್ತು ಇಂದಿರಾನಗರದ 10 ನೇ ‘ಎ’ ಕ್ರಾಸ್ ನಿವಾಸಿ 19 ವರ್ಷದ ಪಿ. ಜಸವಂತ್ ಎಂದು ಗುರುತಿಸಲಾಗಿದೆ.
ಸದ್ಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾ ನಗರ ಪೊಲೀಸರು ತಲೆ ಮರಿಸಿಕೊಂಡಿರುವ ರೌಡಿ ಶೀಟರ್ ಕದಂಬ ನ ಹುಡುಕಾಟದಲ್ಲಿದ್ದಾರೆ.