27 ಸೆಪ್ಟೆಂಬರ್ 1925 ರಂದು ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ RSS 100 ವರ್ಷದ ಸಂಭ್ರಮದಲ್ಲಿದೆ. ತನ್ನ ಸ್ಥಾಪನೆಯ 100ನೇ ವರ್ಷವನ್ನು ಆಚರಿಸಲು ಶತಮಾನೋತ್ಸವ ಕಾರ್ಯಕ್ರಮಗಳ ಘೋಷಣೆ ಮಾಡಿದೆ. ದೇಶದಾದ್ಯಂತ ಭಾರೀ ಮಟ್ಟದ ಕಾರ್ಯಕ್ರಮಗಳನ್ನ ಆಯೋಜಿಸಲು ಸಜ್ಜಾಗಿದೆ. ಶತಮಾನೋತ್ಸವ ತ್ಯಾಗ, ಭಕ್ತಿ ಹಾಗೂ ಸ್ಥಿತಿಸ್ಥಾಪಕತ್ವದ ನಿದರ್ಶನವಾಗಿದೆ ಎಂದು ಸಂಘದ ಹಿರಿಯರು ತಿಳಿಸಿದ್ದಾರೆ.
RSS ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ಮಂಗಳವಾರ ನಾಗಪುರದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶಾದ್ಯಂತ ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಸಂಘ ಉದ್ದೇಶಿಸಿದೆ. ಅಕ್ಟೋಬರ್ 2ರಂದು ವಿಜಯದಶಮಿಯಿಂದ ಶತಮಾನೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿವೆ. ಮುಂದಿನ ದಸರಾ ತನಕ ಕಾರ್ಯಕ್ರಮಗಳು ಮುಂದುವರಿಯಲಿವೆ. ಈ ಹಬ್ಬ ದೇಶದ ಸ್ವಾವಲಂಬನೆಗಾಗಿ ಹಾಗೂ ವಸಾಹತುಶಾಹಿ ಮನೋಭಾವದ ವಿರುದ್ಧ ಹೋರಾಡುವ ಒಂದು ಸಾಮಾಜಿಕ ಚಳವಳಿಯಾಗಿದ ಎಂದು ಹೇಳಿದರು.
ಅಕ್ಟೊಬರ್ 2ರಂದು ನಾಗಪುರದ ರೇಶಿಮಬಾಗ್ ಮೈದಾನದಲ್ಲಿ ಶತಮಾನೋತ್ಸವ ನಡೆಯಲಿದೆ. ಈ ಪ್ರಮುಖ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇದರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಷಣ ಮಾಡಲಿದ್ದಾರೆ.
ಸಂಘವು ಈ ಶತಮಾನೋತ್ಸವ ವರ್ಷದಲ್ಲಿ ದೇಶದಾದ್ಯಂತ 1 ಲಕ್ಷಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸುವ ಯೋಜನೆ ಹೊಂದಿದೆ. ವಿವಿಧ ರಾಜಧಾನಿಗಳಲ್ಲಿ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ನಾಗುರದಲ್ಲಿ ಮಕ್ಕಳ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ನವೆಂಬರ್ 7–8ರಂದು ಬೆಂಗಳೂರಿನಲ್ಲಿ, ಡಿಸೆಂಬರ್ 21ರಂದು ಕೋಲ್ಕತಾದಲ್ಲಿ, ಫೆಬ್ರವರಿ 6–7ರಂದು ಮುಂಬೈನಲ್ಲಿ ವಿಶೇಷ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅಕ್ಟೊಬರ್ 2 ಬುಧವಾರದಂದು ದೆಹಲಿಯ ಅಂಬೇಡ್ಕರ್ ಮೈದಾನದಲ್ಲಿ ಶತಮಾನೋತ್ಸವಕ್ಕೆ ಚಾಲನೆ ನೀಡಲು ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ RSS ಸ್ಮರಣಾರ್ಥವಾಗಿ ರಚಿಸಿರುವ ವಿಶೇಷ ಅಂಚೆಚೀಟಿ ಹಾಗೂ ಸ್ಮಾರಕ ನಾಣ್ಯವನ್ನು ಅವರು ಬಿಡುಗಡೆ ಮಾಡಲಿದ್ದಾರೆ.
ವರದಿ : ಲಾವಣ್ಯ ಅನಿಗೋಳ




