ಕರ್ನಾಟಕ ರಾಜಕೀಯದಲ್ಲಿ ಹೊಸ ತಿರುವಿಗೆ ಕಾರಣವಾದದ್ದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯ ನಿಯೋಗ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಲು ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಅವರ ಆರೋಪವೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದಲ್ಲಿ ಧಾರ್ಮಿಕ ಧ್ರುವೀಕರಣ ಹಾಗೂ ಸಾಮಾಜಿಕ ಭಿನ್ನತೆ ಉತ್ತೇಜಿಸುತ್ತಿದ್ದು, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಪತ್ರದ ಪರಿಣಾಮವಾಗಿ ರಾಜ್ಯ ರಾಜಕೀಯದ ವಾತಾವರಣ ಬಿಸಿಯಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದ ಒಳಗೆಯೇ ತದ್ವಿರುದ್ಧ ನುಡಿಗಳು ಕೇಳಿ ಬರುತ್ತಿವೆ.
ಈ ಮಧ್ಯೆ ಕಲಬುರಗಿಯಲ್ಲಿ ನಡೆದ ಒಂದು ಘಟನೆ, ಕಾಂಗ್ರೆಸ್ ಪಕ್ಷದ ನಿಲುವಿಗೆ ಸವಾಲಾಗಿ ಪರಿಣಮಿಸಿದೆ. ಪ್ರಿಯಾಂಕ್ ಖರ್ಗೆಯ ತವರು ಜಿಲ್ಲೆಯಲ್ಲೇ, ಅವರದೇ ಪಕ್ಷದ ಶಾಸಕ ಎಂ.ವೈ. ಪಾಟೀಲ್ ಅವರ ಒಡೆತನದ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲೆ ಆವರಣದಲ್ಲಿ ಆರ್‌ಎಸ್‌ಎಸ್ ಬೈಠಕ್ ಮತ್ತು ಪಥಸಂಚಲನ ನಡೆದಿದೆ. ಭಾನುವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಪಾಲ್ಗೊಂಡು ಬೌದ್ಧಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇದರಿಂದ, ಪ್ರಿಯಾಂಕ್ ಖರ್ಗೆಯ ಪತ್ರ ಮತ್ತು ಪಾಟೀಲ್ ಅವರ ಶಾಲೆಯಲ್ಲಿನ ಕಾರ್ಯಕ್ರಮ ಒಂದೇ ಪಕ್ಷದ ಅಂತರವಿರೋಧವನ್ನು ಮೂಡಿಬರುತ್ತಿದೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಎಂವೈ ಪಾಟೀಲ್, ತಮ್ಮ ಶಾಲೆ ಸಾರ್ವಜನಿಕ ಸ್ವತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿಯವರೆಗೆ ಎಲ್ಲಾ ಪಕ್ಷದವರಿಗೆ ಸ್ಥಳ ನೀಡಿದ್ದೇವೆ. ನಮ್ಮ ಶಾಲೆ ಯಾವುದೇ ಪಕ್ಷ ಅಥವಾ ಸಂಘಟನೆಯ ವಿರುದ್ಧವಲ್ಲ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ಆರ್ಯ ಸಮಾಜ ಪರಿಕಲ್ಪನೆ ಹೊಂದಿದೆ. ದೇಶ ಕಟ್ಟುವ ಬದಲು ದೇಶ ಒಡೆಯುವ ಧೋರಣೆ ಹೊಂದಿದೆ. ಲಾಠಿ ಹಿಡಿದು ಪಥಸಂಚಲನ ಮಾಡುವ ಬದಲು, ತಿರಂಗಾ ಹಿಡಿದರೆ ನಾವು ಸ್ವಾಗತಿಸುತ್ತೇವೆ ಎಂಬುದಾಗಿ ಅವರು ಹೇಳಿದ್ದಾರೆ. ಜೊತೆಗೆ, ಆರ್‌ಎಸ್‌ಎಸ್ ಕಚೇರಿಯಲ್ಲಿ ತಿರಂಗಾ ಏರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ರಾಷ್ಟ್ರಪ್ರೇಮದ ಕುರಿತು ಪ್ರಶ್ನೆ ಎತ್ತಿದ್ದಾರೆ.
ಆರ್‌ಎಸ್‌ಎಸ್ ಸ್ಥಾಪನೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಪಥಸಂಚಲನಗಳು ನಡೆಯುತ್ತಿವೆ. ಈ ಸಂದರ್ಭ ಪ್ರಿಯಾಂಕ್ ಖರ್ಗೆ ಪತ್ರ ಬರೆದು ನಿಷೇಧಕ್ಕೆ ಒತ್ತಾಯಿಸುತ್ತಿರುವುದು, ಮತ್ತೊಂದೆಡೆ ಕಾಂಗ್ರೆಸ್ ಶಾಸಕರ ಶಾಲೆಯಲ್ಲೇ ಆ ಕಾರ್ಯಕ್ರಮ ನಡೆಯುವುದು, ಪಕ್ಷದ ನಿಲುವಿನಲ್ಲಿ ಗೊಂದಲವಿದೆ ಎಂಬ ಅಪರೂಪದ ಉದಾಹರಣೆಯಾಗಿ ಪರಿಣಮಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ