Friday, December 5, 2025

Latest Posts

ಅಂದು ಭಗವದ್ಗೀತೆ ನಿಷೇಧಿಸಿದ್ದ ರಷ್ಯಾ – ಇಂದು ಅದನ್ನೇ ಗೌರವಿಸಿದ ಪುಟಿನ್!

- Advertisement -

ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್ ಮಾಡಿ ನಿಷೇಧಿಸಲು ಯತ್ನಿಸಿದ್ದರೆ, ಇಂದು ಅದೇ ಗೀತೆಯ ರಷ್ಯನ್ ಅನುವಾದಿತ ಪ್ರತಿಯನ್ನು ವ್ಲಾಡಿಮಿರ್ ಪುಟಿನ್ ಸ್ವಯಂ ಪ್ರಧಾನಿ ಮೋದಿ ಅವರಿಂದ ಗೌರವದಿಂದ ಸ್ವೀಕರಿಸುವ ಸ್ಥಿತಿ ಬಂದಿದೆ—ಇದು ಕಾಲಚಕ್ರದ ಅದ್ಭುತ ತಿರುವೇ ಸರಿ.

ಭಾರತ ಭೇಟಿಗೆ ಬಂದಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಪ್ರಧಾನಿ ಮೋದಿ 7 ಲೋಕ ಕಲ್ಯಾಣ್ ಮಾರ್ಗದ ಅಧಿಕೃತ ನಿವಾಸದಲ್ಲಿ ಸ್ವಾಗತಿಸಿದರು. ಇದೇ ವೇಳೆ, ಮೋದಿ ಅವರು ಭಗವದ್ಗೀತೆಯ ರಷ್ಯನ್ ಅನುವಾದಿತ ಪ್ರತಿಯನ್ನು ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಇದು 2011ರ ಘಟನೆಗಳನ್ನು ಮತ್ತೆ ನೆನಪಿಗೆ ತಂದಿತು.

2011ರಲ್ಲಿ ರಷ್ಯಾದ ಸೈಬೀರಿಯಾದ ಟಾಮ್ಸ್ಕ್ ನ್ಯಾಯಾಲಯದಲ್ಲಿ ಗೀತೆಯ ರಷ್ಯನ್ ಅನುವಾದದ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇಸ್ಕಾನ್ ಪ್ರಕಟಿಸಿದ್ದ “Bhagavad Gita As It Is” ಪುಸ್ತಕವು ಉಗ್ರಗಾಮಿ ವಿಚಾರಗಳನ್ನು ಪ್ರೋತ್ಸಾಹಿಸುತ್ತದೆ, ಸಾಮಾಜಿಕ ಅಸಮ್ಮತಿಯನ್ನೆಬ್ಬಿಸುತ್ತದೆ ಎಂಬ ಆರೋಪದ ಮೇಲೆ ಅದನ್ನು ನಿಷೇಧಿಸಬೇಕು ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದರು. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಕೂಡಾ ಗೀತೆಯನ್ನು ಸಂಶಯದ ನೋಟದಲ್ಲಿ ನೋಡಿ ತನಿಖೆ ನಡೆಸಿತ್ತು. ಈ ವಿಷಯ ಭಾರತದೊಳಗೆ ಭಾರೀ ಆಕ್ರೋಶವನ್ನು ಉಂಟುಮಾಡಿತು. ಸಂಸತ್ತಿನಿಂದ ಹಿಡಿದು ರಷ್ಯಾ ರಾಯಭಾರಿಕಕ್ಷೆಯವರೆಗೂ ಪ್ರತಿಭಟನೆಗಳು ಜೋರಾಗಿದ್ದವು.

ಆದರೆ ಎಲ್ಲಾ ಆಕ್ಷೇಪಣೆಗಳಿಗೆ ಕೊನೆ ಹಾಕಿದಂತೆ, ಡಿಸೆಂಬರ್ 28, 2011ರಂದು ಟಾಮ್ಸ್ಕ್ ನ್ಯಾಯಾಲಯ ಗೀತೆಯ ಮೇಲೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಭಗವದ್ಗೀತೆಯಲ್ಲಿ ಯಾವುದೇ ಉಗ್ರಗಾಮಿ ವಿಷಯ ಇಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿತು. ತನಿಖೆ ಪಠ್ಯದ ಮೇಲಲ್ಲ, ಕೆಲವು ವ್ಯಾಖ್ಯಾನಗಳ ಮೇಲಷ್ಟೇಂದೂ ರಷ್ಯಾ ವಿದೇಶಾಂಗ ಸಚಿವಾಲಯ ತಿಳಿಸಿತ್ತು.

ಹೀಗೇ 15 ವರ್ಷಗಳು ಕಳೆದಿವೆ. ಒಮ್ಮೆ ಗೀತೆಯನ್ನು ‘ಉಗ್ರ ಪಠ್ಯ’ ಎಂದು ಶಂಕಿಸಿದ್ದ ದೇಶವೇ ಇಂದು ಅದೇ ಗ್ರಂಥವನ್ನು ಗೌರವದಿಂದ ಕೈಗೆತ್ತಿಕೊಳ್ಳುತ್ತಿದೆ. 2025ರ ಈ ಮಹತ್ವದ ಕ್ಷಣದಲ್ಲಿ, ರಷ್ಯನ್ ಭಾಷೆಗೆ ಅನುವಾದಿಸಲಾದ ಗೀತೆಯನ್ನು ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದ ಮೋದಿ—ಭಾರತ-ರಷ್ಯಾ ಸಂಬಂಧಗಳ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಯಿತು. ಕಾಲ ಬದಲಾದರೆ ದೃಷ್ಟಿಕೋನವೂ ಬದಲಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss