Friday, December 5, 2025

Latest Posts

ಸಾಮ್ರಾಜ್ಯವನ್ನೇ ಕರೆತಂದ ಪುಟಿನ್‌.. ದಿಲ್ಲಿಯಲ್ಲಿ ಹೇಗಿದೆ ಮೋದಿ ಕೋಟೆ?

- Advertisement -

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ ದಿಲ್ಲಿಯ ಪಾಲಂ ಏರ್‌ಪೋರ್ಟ್‌ಗೆ ಸ್ವತಃ ಪ್ರಧಾನಿ ಮೋದಿಯವರೇ ಭೇಟಿ ನೀಡಿ ಸ್ವಾಗತ ಕೋರಿದ್ದಾರೆ. ಇದು ಕೇವಲ ಒಂದು ದ್ವಿಪಕ್ಷೀಯ ಭೇಟಿಯಲ್ಲ. ಬದಲಾಗಿ ಇಡೀ ದಿಲ್ಲಿಯನ್ನೇ ಒಂದು ಅಭೇದ್ಯ ಕೋಟೆಯನ್ನಾಗಿ ಪರಿವರ್ತಿಸಿ ನಡೆಯುತ್ತಿರುವ, ಹೈ-ವೋಲ್ಟೇಜ್‌ ಸಮ್ಮಿಟ್‌ ಆಗಿದೆ. ಉಕ್ರೇನ್ ಯುದ್ಧ ಹಿನ್ನೆಲೆ ಜಗತ್ತಿನ ಕಣ್ಣು ಪುಟಿನ್ ಮೇಲಿದೆ. ಈ ಹಿನ್ನೆಲೆ ಅವರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು ಹಾಲಿವುಡ್‌ ಸಿನಿಮಾಗಳನ್ನೂ ಮೀರಿಸುವಂತಿದೆ.

ರಾಷ್ಟ್ರ ರಾಜಧಾನಿಯಲ್ಲಿ 5 ಸುತ್ತಿನ ಭದ್ರತಾ ಕೋಟೆ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ಸ್ನೈಪರ್‌ಗಳು, ಆಕಾಶದಲ್ಲಿ ಡ್ರೋಣ್‌ಗಳು, ಕಣ್ಣಿಗೆ ಕಾಣದಂತೆ ಎಐ ಕಣ್ಗಾವಲು. ಹೀಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಹಂತದ ಸೆಕ್ಯೂರಿಟಿ ರಿಂಗ್‌ ಮಧ್ಯೆ, ಪುಟಿನ್ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ಪುಟಿನ್ ಅವರು ಪ್ರಯಾಣಿಸುವ ಕಾರು, ಅವರು ತಿನ್ನುವ ಊಟ, ಅವರು ಬಳಸುವ ಟಾಯ್ಲೆಟ್‌ ಮೇಲೂ ಕೂಡ ಇಂಟಲಿಜೆನ್ಸ್‌ ಕಣ್ಣಿಟ್ಟಿದೆ. ಹಾಗಾದರೆ, ವ್ಲಾಡಿಮಿರ್‌ ಪುಟಿನ್ ಅವರ ಸೆಕ್ಯೂರಿಟಿ ಹೇಗಿರಲಿದೆ?. ಪುಟಿನ್‌ ಮಲವನ್ನೂ ರಷ್ಯಾಕ್ಕೆ ಪ್ಯಾಕ್‌ ಮಾಡಿಕೊಂಡು ಹೋಗುವುದು ಏಕೆ?. ಈ ಎಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಮೊದಲಿಗೆ ಪುಟಿನ್‌ ತಂಗಲಿರುವ ಹೋಟೆಲ್‌ ಯಾವುದು? ಅದರ ವಿಶೇಷತೆ ಏನು ಅನ್ನೋದನ್ನ ನೋಡೋಣ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ದೆಹಲಿಯ ಐಟಿಸಿ ಮೌರ್ಯದಲ್ಲಿ ಉಳಿದುಕೊಳ್ಳಲಿದ್ದಾರೆ. ಪುಟಿನ್ ಐಟಿಸಿ ಮೌರ್ಯದ ಅತ್ಯಂತ ಐಷಾರಾಮಿ ಸೂಟ್ ಆಗಿರುವ ಚಾಣಕ್ಯ ಸೂಟ್‌ನಲ್ಲಿ ತಂಗಿದ್ದಾರೆ. ಮೌರ್ಯ ಹೋಟೆಲ್ ಸೂಟ್ 4,600 ಚದರ ಅಡಿಗಳನ್ನು ವ್ಯಾಪಿಸಿದೆ. ಇಲ್ಲಿ ಒಂದು ರಾತ್ರಿಗೆ ಬಾಡಿಗೆ ಅಂದಾಜು 8ರಿಂದ 10 ಲಕ್ಷ ರೂ. ಎನ್ನಲಾಗಿದೆ. ಈ ಹೋಟೆಲ್‌ನಲ್ಲಿ ಪುಟಿನ್ ಅವರ ನಿಯೋಗಕ್ಕೆ ಸಾಕಷ್ಟು ರೂಂಗಳನ್ನು ಬುಕ್ ಮಾಡಲಾಗಿದೆ.

ಪುಟಿನ್ ಅವರೊಂದಿಗೆ ದೊಡ್ಡ ನಿಯೋಗ ಕೂಡ ರಷ್ಯಾದಿಂದ ಆಗಮಿಸಿದೆ. ರಷ್ಯಾದ 7 ಸಚಿವರು ಭಾರತಕ್ಕೆ ಬರುತ್ತಿದ್ದಾರೆ. ಅವರಿಗೂ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ವರದಿಗಳ ಪ್ರಕಾರ, ಪುಟಿನ್ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಅವರು 4,700 ಚದರ ಅಡಿ ವಿಸ್ತೀರ್ಣದ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ತಂಗಲಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡೆನ್ ಮತ್ತು ಬಿಲ್ ಕ್ಲಿಂಟನ್ ಕೂಡ ವಾಸ್ತವ್ಯ ಹೂಡಿದ್ದ ವಿಶೇಷ ರೂಂ ಆಗಿದೆ.

ಈ ಹೋಟೆಲ್‌ನಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆಗಾಗಿ ಭಾರತೀಯ ಮತ್ತು ರಷ್ಯಾದ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ವರದಿಗಳ ಪ್ರಕಾರ, ಭದ್ರತಾ ಕಾರಣಗಳಿಗಾಗಿ ಹೋಟೆಲ್‌ನ ಪ್ರವೇಶದ್ವಾರವನ್ನು ಬಿಳಿ ಪರದೆಗಳಿಂದ ಮುಚ್ಚಲಾಗಿದೆ. ಇಡೀ ಹೋಟೆಲ್ ಅನ್ನು ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲಾ ಅತಿಥಿಗಳ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ.ರಷ್ಯಾದ ನಿಯೋಗವು ಐಟಿಸಿ ಮೌರ್ಯ ಹೋಟೆಲ್ ಪಕ್ಕದ ತಾಜ್ ಪ್ಯಾಲೇಸ್‌ನಲ್ಲಿಯೂ ರೂಂಗಳನ್ನು ಕಾಯ್ದಿರಿಸಿದೆ ಎಂದು ಹಲವಾರು ಹೋಟೆಲ್ ಅಧಿಕಾರಿಗಳು ತಿಳಿಸಿದ್ದಾರೆ. ತಾಜ್ ಪ್ಯಾಲೇಸ್, ತಾಜ್ ಮಹಲ್, ಒಬೆರಾಯ್, ಲೀಲಾ ಮತ್ತು ಮೌರ್ಯ ಸೇರಿದಂತೆ ಮಧ್ಯ ದೆಹಲಿಯಲ್ಲಿರುವ ಎಲ್ಲಾ ಪ್ರಮುಖ ಪಂಚತಾರಾ ಹೋಟೆಲ್‌ಗಳು ಈ ವಾರ ಸಂಪೂರ್ಣವಾಗಿ ಬುಕ್ ಆಗಿವೆ. ಬುಧವಾರದವರೆಗೆ ಈ ಹೋಟೆಲ್‌ಗಳಲ್ಲಿ ಕೊಠಡಿ ದರ 50,000ರಿಂದ 80,000 ರೂಪಾಯಿಗಳಷ್ಟಿತ್ತು. ಆದರೆ ಗುರುವಾರದಿಂದ ಅದು 85,000ರಿಂದ 1.3 ಲಕ್ಷ ರೂಪಾಯಿಗಳಿಗೆ ಏರಿದೆ.

ಇನ್ನು, ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌ ಯಾವುದೇ ದೇಶಕ್ಕೆ ಭೇಟಿ ಕೊಟ್ಟರೂ, ಸ್ಥಳೀಯವಾಗಿ ಏನನ್ನೂ ಸೇವಿಸುವುದಿಲ್ಲ. ಪುಟಿನ್ ಅವರಿಗೆ ನೀಡುವ ಎಲ್ಲಾ ಆಹಾರ ಮತ್ತು ನೀರನ್ನು ಪರೀಕ್ಷಿಸಲು ಮೊಬೈಲ್ ರಾಸಾಯನಿಕ ಪ್ರಯೋಗಾಲಯವು ಅವರೊಂದಿಗೆ ಪ್ರಯಾಣಿಸುತ್ತದೆ. ಕಟ್ಟುನಿಟ್ಟಾದ ಪರಿಶೀಲನೆಯಿಲ್ಲದೆ ಸ್ಥಳೀಯವಾಗಿ ಅವರು ಏನನ್ನೂ ಸೇವಿಸುವುದಿಲ್ಲ. ಪುಟಿನ್‌ ಹೋಟೆಲ್‌ ಊಟಗಳನ್ನು ಸೇವಿಸುವುದಿಲ್ಲ. ಬಾಣಸಿಗರ ತಂಡವೂ ಜೊತೆಯಲ್ಲೇ ಪ್ರವಾಸ ಮಾಡುತ್ತದೆ. ಅಲ್ಲದೆ, ಪುಟಿನ್ ಅವರು ಹೊರಗಿನ ಶೌಚಾಲಯವನ್ನು ಕೂಡ ಬಳಸುವುದಿಲ್ಲ. ಅವರು ಎಲ್ಲೇ ಹೋದರೂ ಪೋರ್ಟಬಲ್ ಟಾಯ್ಲೆಟ್ ಕೂಡ ಅವರ ಜೊತೆ ಇರುತ್ತದೆ. ಇದರಿಂದ ಪುಟಿನ್‌ ಅವರ ಆರೋಗ್ಯದ ಬಗ್ಗೆ ಯಾರಿಗೂ ಯಾವುದೇ ಚಿಕ್ಕ ಮಾಹಿತಿಯೂ ಸಹ ಸಿಗುವುದಿಲ್ಲ.

ಇನ್ನು, ಭದ್ರತೆಯನ್ನ ನೋಡೋದಾದ್ರೆ, ಪುಟಿನ್ ಅವರ ಭದ್ರತೆಯ ಹೊಣೆ ಪ್ರೆಸಿಡೆನ್ಶಿಯಲ್‌ ಸೆಕ್ಯೂರಿಟಿ ಸರ್ವಿಸ್‌ ವಹಿಸಿಕೊಳ್ಳುತ್ತದೆ. ಈ ತಂಡದ ಸದಸ್ಯರು ಪುಟಿನ್‌ ಬಳಿಯೇ ಇರುತ್ತಾರೆ. ಇವರ ನಂತರ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು, ದೆಹಲಿ ಪೊಲೀಸರು ಇರಲಿದ್ದಾರೆ. ಪುಟಿನ್‌ ಮತ್ತು ಮೋದಿ ಭೇಟಿ ವೇಳೆ ಮಾತ್ರ, ಭಾರತದ ಎನ್‌ಎಸ್‌ಜಿ ಕಮಾಂಡೊಗಳು ರಷ್ಯಾ ಭದ್ರತಾ ಅಧಿಕಾರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ.

ಪುಟಿನ್‌ ಬೆಂಗಾವಲು ಪಡೆ ಹಾದುಹೋಗುವ ಪ್ರತಿಯೊಂದು ಮಾರ್ಗವನ್ನು ಪರಿಶೀಲಿಸಲಾಗುತ್ತದೆ. ಬೆಂಗಾವಲು ಪಡೆಯ ಮೇಲೆ ಕಣ್ಣಿಡಲು ವಿಶೇಷ ಡ್ರೋಣ್‌ಗಳನ್ನು ಬಳಸಲಾಗುತ್ತದೆ. ಭದ್ರತೆಗೆ ಸ್ಥಾಪನೆ ಮಾಡಲಾಗಿರುವ ನಿಯಂತ್ರಣ ಕೊಠಡಿಯ ಮೂಲಕ ಕಣ್ಗಾವಲು ಇಡಲಾಗುತ್ತದೆ. ಜಾಮರ್ ಮತ್ತು ಎಐ ಆಧಾರಿತ ತಂತ್ರಜ್ಞಾನದ ಅಳವಡಿಕೆ, ಮುಖ ಗುರುತು ಪತ್ತೆ ಕ್ಯಾಮರಾ ಸೇರಿ ಪುಟಿನ್‌ ಭದ್ರತೆಗೆ ಬೃಹತ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಭದ್ರತೆಗೆ 35 ವರ್ಷದ ಒಳಗಿನ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತದೆ. ಈ ಸಿಬ್ಬಂದಿ ಎತ್ತರ 5.8 ಅಡಿ ಎತ್ತರದಿಂದ 6.2 ಅಡಿ ಎತ್ತರ ಇರಬೇಕಾಗುತ್ತದೆ. ಪುಟಿನ್‌ ಸಂಚರಿಸುವ ಕಾರು ಔರಾಸ್‌ ಸೆನಾಟ್‌ ಮಾಸ್ಕೋದಿಂದ ದೆಹಲಿಗೆ ಬಂದಿದ್ದು, ಇದು ಪಂಕ್ಚರ್‌ ಆದರೂ ಸರಾಗವಾಗಿ ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ.

ಜೊತೆಗೆ ಪುಟಿನ್ ಪ್ರವೇಶಿಸಬಹುದಾದ ಪ್ರತಿಯೊಂದು ಕಟ್ಟಡವನ್ನು ರಷ್ಯಾದ ಭದ್ರತಾ ತಂಡ ಪರಿಶೀಲಿಸುತ್ತವೆ. ಪ್ರವೇಶದ್ವಾರಗಳು, ಛಾವಣಿಗಳು, ನೆಲಮಾಳಿಗೆಗಳು ಮತ್ತು ಸ್ಥಳಾಂತರಿಸುವ ಮಾರ್ಗಗಳನ್ನು ಮ್ಯಾಪಿಂಗ್ ಮಾಡುತ್ತವೆ.‌ ಒಟ್ನಲ್ಲಿ ಪುಟಿನ್‌ ಭಾರತಕ್ಕೆ ಬಂದಿದ್ದ ಒಬ್ಬರೇ ಅಲ್ಲ. ಜೊತೆಯಲ್ಲಿ ತಮ್ಮ ಸಾಮ್ರಾಜ್ಯವನ್ನೇ ಕರೆದುಕೊಂಡು ಬಂದಿದ್ದಾರೆ.

 

- Advertisement -

Latest Posts

Don't Miss