ಶಬರಿಮಲೆ ಮಕರಜ್ಯೋತಿ ಉತ್ಸವವು ಜನವರಿ 14ರಂದು ನಡೆಯಲಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಮಕರಜ್ಯೋತಿ ತೀರ್ಥಾಟನೆ ಋತು ಆರಂಭವಾಗುತ್ತಿದ್ದಂತೆ ಶಬರಿಮಲೆಗೆ ಭಕ್ತರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಭಕ್ತರ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಶಬರಿಮಲೆ ಸನ್ನಿಧಾನ ವ್ಯಾಪ್ತಿಯಲ್ಲೇ 1,600 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜನವರಿ 12ರಿಂದ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿರುವುದರಿಂದ, ದಟ್ಟಣೆ ನಿವಾರಣೆಗೆ ವಿಶೇಷ ವ್ಯವಸ್ಥೆಗಳನ್ನು ರೂಪಿಸಲಾಗಿದೆ.
ಜನವರಿ 14ರಂದು ಸಂಜೆ 6.40ಕ್ಕೆ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ದರ್ಶನ ನಡೆಯಲಿದೆ. ಈ ವೇಳೆ ಕಂಠಾರರ್ ದೇವಸ್ಥಾನದ ತಂತ್ರಿವರ್ಯ ಮಹೇಶ್ ಮನೋಹರ್ ಹಾಗೂ ಶಬರಿಮಲೆ ದೇವಾಲಯದ ಮುಖ್ಯ ಅರ್ಚಕ E.D. ಪ್ರಸಾದ್ ನಂಬೂದಿರಿ ಅವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಪವಿತ್ರಾಭರಣ ತೊಡಿಸಿ ಮಕರಮಾಸ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪೂಜೆಯ ಮಧ್ಯೆ ಭಕ್ತರಿಗೆ ದಿವ್ಯಜ್ಯೋತಿಯ ದರ್ಶನ ದೊರೆಯಲಿದೆ.
ಇನ್ನೊಂದೆಡೆ, ಶಬರಿಮಲೆ ದೇವಾಲಯದ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ SIT, ಶುಕ್ರವಾರ ದೇವಾಲಯದ ಪ್ರಧಾನ ಅರ್ಚಕರಾದ ಕಂದರಾರು ರಾಜೀವರನ್ನು ಬಂಧಿಸಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಕುಮಾರ್ ನೀಡಿದ ಹೇಳಿಕೆಗಳ ಆಧಾರದ ಮೇಲೆ ಈ ಬಂಧನ ನಡೆದಿದೆ. ರಾಜೀವರನ್ನು ಶುಕ್ರವಾರ ಬೆಳಗ್ಗೆ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿ, ನಂತರ ಮಧ್ಯಾಹ್ನ SIT ಕಚೇರಿಗೆ ಸ್ಥಳಾಂತರಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




