Saturday, July 5, 2025

Latest Posts

ಹುಬ್ಬಳ್ಳಿಯಲ್ಲೊಬ್ಬರು ಸಾಲುಮರದ ತಿಮ್ಮಕ್ಕ

- Advertisement -

www.karnatakatv.net : ಹುಬ್ಬಳ್ಳಿ: ವಿಶ್ವ ಪರಿಸರ ದಿನ ಅಂದರೆ ನಮ್ಮೆಲ್ಲರಿಗೂ ನೆನಪಿಗೆ ಬರುವುದು ಸಾಲು‌ ಮರದ ತಿಮ್ಮಕ್ಕ. ಅವರು ಮಾಡಿದ ಕೆಲಸ ಕಾರ್ಯಗಳು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ. ಹಾಗಿದ್ದರೇ ಬನ್ನಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಸಾಲು ಮರದ ತಿಮ್ಮಕ್ಕ ಅವರನ್ನು ನೋಡಿಕೊಂಡು ಬರೋಣ…

90 ವರ್ಷದ ಮಲ್ಲಮ್ಮ ಸೋಮಪ್ಪ ವಾಲ್ಮೀಕಿ ಅಜ್ಜಿಯ ಪರಿಸರ ಕಾಳಜಿ, ಬದ್ಧತೆ, ಅದರ ಮೇಲಿನ ಪ್ರೀತಿ ಇಂದಿಗೂ ಕುಂದಿಲ್ಲ. ಹೌದು, ಪತಿಯೊಂದಿಗೆ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡಿದ ಆ ಅನುಭವವನ್ನು ಕಾಂಕ್ರಿಟ್ ಕಾಡಿನ ಮಧ್ಯೆ ವಿನಿಯೋಗಿಸುತ್ತಿದ್ದಾರೆ ಮಲ್ಲಮ್ಮ. ಇದರ ಪರಿಣಾಮ ತಮ್ಮದೇ ಆದ ಮಿನಿ ಕಾಡಿನ ವಾತಾವರಣ ನಿರ್ಮಿಸಿಕೊಂಡು ಸ್ವಚ್ಛಂದ ಗಾಳಿ ಪಡೆಯುತ್ತಿದ್ದಾರೆ. ಬಟಾ ಬಯಲಿನಂತಿದ್ದ ಹುಬ್ಬಳ್ಳಿ ಮಹಾನಗರದ ರಾಜೀವ ನಗರದಲ್ಲಿ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಪ್ರಸ್ತುತ ಹಚ್ಚು ಹಸಿರು, ತಂಪಾದ ವಾತಾವರಣವನ್ನಾಗಿ ಸೃಷ್ಟಿಸಿದ್ದಾರೆ. 

ಅರಣ್ಯ ರಕ್ಷಕ, ಅಧಿಕಾರಿಯಾಗಿದ್ದ ಪತಿ ಸೋಮಪ್ಪ ಅವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ನಾನಾ ಅರಣ್ಯ ಪ್ರದೇಶದಲ್ಲಿ ಸೇವಾ ನಿವೃತ್ತಿ ಬಳಿಕ ಬಿಲ್ಡಿಂಗ್ ಮಧ್ಯೆ ಬದುಕು ಸಾಗಿಸುವುದು ಉಸಿರುಕಟ್ಟಿದಂತೆ ಅನಿಸತೊಡಗಿತ್ತು. ಆಗ ಮನೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಆರಂಭಿಸಿದರು. ಅರಣ್ಯ ನರ್ಸರಿಯಲ್ಲಿ ನಿತ್ಯವೂ ಸಸಿಗಳೊಂದಿಗೆ ಮಾತುಕತೆ ಮಾಡಿದಂತೆ ಮಲ್ಲಮ್ಮ ವಾಲ್ಮೀಕಿ, ಇಳಿ ವಯಸ್ಸಿನಲ್ಲಿ ತಾವು ನೆಟ್ಟ ಸಸಿಗಳನ್ನು ಹಾಡು ಪಾಡಿನೊಂದಿಗೆ ಬೆಳೆಸಲು ಶುರು ಮಾಡಿದರು. ಅದೇ ಕಾಯಕ ಎನ್ನುವಂತೆ ಬೆಳಗ್ಗೆಯಿಂದ ಸಂಜೆ ವರೆಗೂ ಅದರಲ್ಲೇ ತನ್ಮಯತೆಯಿಂದ ಕಾಲ ಕಳೆಯುತ್ತಿದ್ದಾರೆ.

ಅಜ್ಜಿಯ ಮನೆ ಬಳಿ ಸಾಗಿದರೆ ಹಲವಾರು ಗಿಡಗಳು ಸ್ವಾಗತಿಸುತ್ತವೆ. ಅಡಕೆ, ಅರಳಿ ಮರ, ನಾನಾ ಜಾತಿಯ ಮಾವಿನ ಮರಗಳು, ಕಾಡಿನಲ್ಲಿ ಬೆಳೆಯುವ ಹಲಸಿನ ಮರಗಳು, ಇಲಾಚಿ ಗಿಡಗಳು, ಬದಾಮ   ಗಿಡಗಳು, ಬನ್ನಿ ಮರ, ಬೇವಿನ ಗಿಡಗಳು, ಗೊಬ್ಬರ ಗಿಡಗಳು, ತೆಂಗಿನ ಮರ,  ಸ್ವಾಗತಿಸುತ್ತವೆ.  ಹಾಗೆಯೇ ಬ್ರಹ್ಮಕಮಲ, ಸಂಪಿಗೆ ಹೂವು, ದಾಸವಾಳ ಹೂವಿನ ಗಿಡಗಳು, ಕಾಡು ಮಲ್ಲಿಗೆ  ಸೇರಿ ನಾಲ್ಕು ಬಗೆಯ ಮಲ್ಲಿಗೆ ಹೂವಿನ ಗಿಡಗಳು ಕಾಣಸಿಗುತ್ತವೆ. ಮನೆ ಬಾಗಿಲಲ್ಲಿ ಅಜವಾನ ಸಸಿಗಳು ಕಣ್ಸೆಳೆಯುತ್ತಿವೆ. ನಿತ್ಯವೂ ಅವುಗಳ ಎಲೆ ಸೇವಿಸುವ  ಮಲ್ಲಮ್ಮ ಅಜೀರ್ಣ ಸಮಸ್ಯೆಯನ್ನೇ ಎದುರಿಸಿಲ್ಲವಂತೆ.

ಮನೆ ಅಂದ, ಚೆಂದ ಕಾಣಲೆಂದು, ಕ್ರಿಮಿಕೀಟಗಳು, ಸರಿಸೃಪಗಳ ಕಾಟವಾಗುತ್ತದೆ ಎಂದು ಮರಗಳನ್ನು ಕಟ್ ಮಾಡುತ್ತಿರುವ ಸಿಟಿ ಜನರ ಮಧ್ಯೆ ಹಸಿರುದೇವಿಯಂತೆ ಕಾಣುವ ಈ ಮಲ್ಲಮ್ಮ ಅಜ್ಜಿ, ತಮ್ಮ ದೊಡ್ಡ ಮನೆಯನ್ನು ಹಲವಾರು ಮರಗಳು, ಹೂ ಗಿಡಗಳು, ಹಣ್ಣಿನ ಗಿಡಗಳಿಂದ ಸಂಪೂರ್ಣ  ಆವರಿಸುಂತೆ ಮಾಡಿದ್ದಾರೆ.

ಪರಿಸರ ಪ್ರೀತಿ ಯ ಈ ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು ಸಾಥ್ ನೀಡುತ್ತಿದ್ದಾರೆ. ಶುದ್ಧ ಆಕ್ಸಿಜನ್, ಹಸುರಿನ ಮಧ್ಯೆ ಜೀವನ ಸಾಗಿಸುತ್ತಿರುವ  ಮಲ್ಲಮ್ಮಳನ್ನು ಕಂಡರೆ 90 ವರ್ಷ ಎಂದು ಅನಿಸುವುದೇ ಇಲ್ಲ. ಇದುವೇ ಅಲ್ಲವೇ ಪರಿಸರ ಮೆಚ್ಚಿಸಿದರೆ ಅದು ನಮ್ಮನ್ನು ಸದೃಢರನ್ನಾಗಿಸುತ್ತದೆ ಎನ್ನುವುದಕ್ಕೆ ಮಲ್ಲಮ್ಮ ನಿದರ್ಶನವಾಗಿ ಕಾಣುತ್ತಾರೆ.

ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss