ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ, ಸಾವಯವ ಕೃಷಿ ಜಾಗೃತಿಗೆ ‘ ಸಂಜೀವಿನಿ ‘ ಒಡಂಬಡಿಕೆ – ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಸ್ವಸಹಾಯ ಸಂಘಗಳ ಉದ್ಯಮಶೀಲ ಮಹಿಳೆಯರಿಗೆ ಮಾರುಕಟ್ಟೆ ಮತ್ತಿತರ ಉತ್ತೇಜನ‌ ನೀಡಲು ಮತ್ತು ಸಾವಯವ ಕೃಷಿ ಸಂಬಂಧ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯು ಬುಧವಾರ ಎರಡು ಮಹತ್ವದ ಒಡಂಬಡಿಕೆ ಮಾಡಿಕೊಂಡಿತು.

ಜೀವನೋಪಾಯ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯು ಕ್ರಮವಾಗಿ ಬೆಂಗಳೂರಿನ ಐಐಎಂ ಮತ್ತು ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘಗಳ ಜತೆ ಈ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡಿತು.

ಇದೇ ಸಂದರ್ಭದಲ್ಲಿ ಸಚಿವರು, ಕೌಶಲ್ಯಾಭಿವೃದ್ಧಿ ಇಲಾಖೆಯ ಸಮಗ್ರ ವೆಬ್ ಪೋರ್ಟಲ್ www.kaushalykar.karnataka.gov.in ಗೆ ಕೂಡ ಚಾಲನೆ ನೀಡಿದರು.

ಇವುಗಳ ಪೈಕಿ ಐಐಎಂಬಿ ಜತೆಗಿನ ಒಡಂಬಡಿಕೆ 2 ವರ್ಷದ್ದಾಗಿದ್ದು, ಇದರಡಿ 10 ಕೋಟಿ ರೂ. ವೆಚ್ಚದಲ್ಲಿ ಇನ್ಕ್ಯುಬೇಟರ್ ಸೌಲಭ್ಯ ಸಿಗಲಿದೆ. ಈ ಮೂಲಕ ಸ್ವಸಹಾಯ ಸಂಘಗಳಲ್ಲಿ ತೊಡಗಿ ಕೊಂಡಿರುವ ಮಹಿಳೆಯರಿಗೆ ಅಗತ್ಯ ಮಾರ್ಗದರ್ಶನ ಸಿಗಲಿದೆ ಎಂದು ಸಚಿವರು ವಿವರಿಸಿದರು.

ಈ ಪರಿಪೋಷಣಾ ಕೇಂದ್ರದ ಮೂಲಕ ಮಹಿಳೆಯರ ನೇತೃತ್ವದ ಸ್ವಸಹಾಯ ಸಂಘಗಳ ಆದಾಯದಲ್ಲಿ ಶೇ.15ರಷ್ಟು ಹೆಚ್ಚಳ ಸಾಧಿಸಲಾಗುವುದು. ಇದಕ್ಕೆ ಅಗತ್ಯವಾದ ವಹಿವಾಟು ಮಾದರಿ, ತರಬೇತಿ, ಗುಣಮಟ್ಟ ನಿಯಂತ್ರಣ, ಗೋದಾಮು ಸೌಲಭ್ಯ ಮತ್ತು ಪೂರೈಕೆ ಸರಪಳಿ ಬಗ್ಗೆ ಅರಿವು ಮೂಡಿಸಿ, ನೆರವು ನೀಡಲಾಗುವುದು ಎಂದು ಅವರು ನುಡಿದರು.

ಕಳೆದ ಎರಡು ವರ್ಷಗಳಲ್ಲಿ ತಲಾ 20, 15 ಮತ್ತು 12 ಲಕ್ಷ ರೂ. ವಹಿವಾಟು ನಡೆಸಿರುವಂತಹ ಸಂಸ್ಥೆಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಕಾರ್ಯಕ್ರಮದಡಿ, ಈ ಉದ್ದಿಮೆಗಳಿಗೆ ಅವುಗಳಿಗೆ ಬೇಕಾದ ಬಂಡವಾಳದಲ್ಲಿ ಶೇ.75ರಷ್ಟನ್ನು ‘ಸವಾಲು ಸ್ವೀಕೃತಿ ನಿಧಿ’ ಯ ರೂಪದಲ್ಲಿ ಒದಗಿಸಿ, ಸುಗಮ ಸಾಲಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಸುಭಿಕ್ಷಾ ಸೊಸೈಟಿ ಜತೆ ಮಾಡಿಕೊಂಡಿರುವ ಒಡಂಬಡಿಕೆಯು, ಸಾವಯವ ಕೃಷಿ ಮಾಡುತ್ತಿರುವ ಮಹಿಳೆಯರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ನೆರವು ನೀಡಲಿದೆ. ವಹಿವಾಟಿನಲ್ಲಿ ಬರುವ ಹಣವನ್ನು ನೇರವಾಗಿ ಅವರ ಖಾತೆಗೇ ವರ್ಗಾಯಿಸಲಾಗುವುದು. ಜತೆಗೆ, ಉತ್ಪನ್ನಗಳ ಮಾರಾಟಕ್ಕೆ ಚಿಲ್ಲರೆ ಮಳಿಗೆಗಳನ್ನು ತೆರೆಯಲು ಸುಭಿಕ್ಷಾ ಸೊಸೈಟಿ ಸಹಾಯ ಮಾಡಲಿದೆ ಎಂದು ಅವರು ವಿವರಿಸಿದರು.

ಇದರ ಜತೆಗೆ, ಸಾವಯವ ಕೃಷಿ ನಿರತ ಮಹಿಳೆಯರಿಗೆ ಉತ್ಪನ್ನಗಳ ಸಂಸ್ಕರಣೆ, ಉತ್ತಮ ಕೃಷಿ ಪದ್ಧತಿ, ಮಣ್ಣಿನ ಫಲವತ್ತತತೆ ಮತ್ತು ತೇವಾಂಶ ರಕ್ಷಣೆಯ ಬಗ್ಗೆ ಅತಿವು ಮೂಡಿಸಿ, ನೆರವು ನೀಡಲಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಾವಯವ ಕೃಷಿ ಮಿಶನ್ ಮುಖ್ಯಸ್ಥ ಆನಂದ್, ಐಐಎಂಬಿಯ ಪ್ರೊ.ವೆಂಕಟೇಶ್, ಎನ್ಆರ್ಎಲ್ಎಂ ನಿರ್ದೇಶಕಿ ಮಂಜುಶ್ರೀ, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮತ್ತು ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಇದ್ದರು.

About The Author