ಹುಟ್ಟುವ ಮೊದಲೇ ಮಗುಗೆ ಗರ್ಭದಲ್ಲೇ ಸಂಸ್ಕಾರ!

ಭ್ರೂಣಾವಸ್ಥೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂಬ ಉದ್ದೇಶದೊಂದಿಗೆ ಮಧ್ಯಪ್ರದೇಶ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಗರ್ಭ ಸಂಸ್ಕಾರ’ ಎಂಬ ವಿಶೇಷ ಕೊಠಡಿಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ಇಂದೋರ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮೋಹನ್ ಯಾದವ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಜೊತೆಗೆ ರಾಜ್ಯದ ಎಲ್ಲಾ ಆರೋಗ್ಯ ವಿಶ್ವವಿದ್ಯಾಲಯಗಳಲ್ಲಿ ಗರ್ಭ ಸಂಸ್ಕಾರ ಪದ್ಧತಿಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು. ಈ ಸಂಬಂಧ ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದಾಗಿ ತಿಳಿಸಿದ್ದಾರೆ.

ಸರ್ಕಾರದ ಈ ಹೊಸ ಯೋಜನೆಯಡಿ, ಹುಟ್ಟಲಿರುವ ಮಗುವಿನ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸುವ ಉದ್ದೇಶದಿಂದ ಗರ್ಭಿಣಿಯರಿಗೆ ಸಾಂಪ್ರದಾಯಿಕ ಭಾರತೀಯ ಪದ್ಧತಿ ಆಧಾರಿತ ಪ್ರಸವಪೂರ್ವ ಆರೈಕೆಯನ್ನು ಈ ವಿಶೇಷ ಕೊಠಡಿಗಳಲ್ಲಿ ಒದಗಿಸಲಾಗುತ್ತದೆ.

‘ಗರ್ಭ’ ಎಂದರೆ ಗರ್ಭಕೋಶ, ‘ಸಂಸ್ಕಾರ’ ಎಂದರೆ ಮೌಲ್ಯಗಳು. ಮಗು ಗರ್ಭದಲ್ಲಿರುವಾಗಲೇ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವ ಪ್ರಕ್ರಿಯೆಯೇ ಗರ್ಭ ಸಂಸ್ಕಾರ. ಈ ವಿಧಾನ ಮಗು ಎರಡು ವರ್ಷ ವಯಸ್ಸಾಗುವವರೆಗೂ ಮುಂದುವರಿಯುತ್ತದೆ ಎಂಬ ನಂಬಿಕೆಯಿದೆ.

ಈ ಪದ್ಧತಿಯಡಿ ಗರ್ಭಿಣಿಯರನ್ನು ಧರ್ಮಗ್ರಂಥಗಳ ಪಠಣ, ಧನಾತ್ಮಕ ಚಿಂತನೆ ಹಾಗೂ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತದೆ.

ವರದಿ : ಲಾವಣ್ಯ ಅನಿಗೋಳ

About The Author