Dharwad News: ಧಾರವಾಡ: ಬಿಜೆಪಿ ಹಗರಣಗಳ ಬಗ್ಗೆ ಸಮಿತಿ ರಚನೆ ವಿಚಾರದ ಬಗ್ಗೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಸಮ್ಮತಿಗೆ ಸಿಎಂ ಎರಡು ತಿಂಗಳ ಕಾಲಾವಕಾಶವನ್ನು ನೀಡಿದ್ದಾರೆ. ಬಿಜೆಪಿಯಲ್ಲಿನ ಹಗರಣಗಳ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು. ಸಿಎಂ ನಮಗೆ ತಾಕೀತು ಮಾಡಿದ್ದಾರೆ. ಹಗರಣ ಪ್ರಕರಣಗಳ ಸಮನ್ವಯ ಸಮಿತಿ ಸದಸ್ಯನನ್ನಾಗಿ ನನಗಡ ಸಿಎಂ ನೇಮಿಸಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಪರಮೇಶ್ವರ, ಎಚ್.ಕೆ.ಪಾಟೀಲ ಅವರಿದ್ದಾರೆ. ಅವರು ಹಿರಿಯರು ಅವರು ಸಭೆ ಕರೆದಾಗ ಹೋಗುತ್ತೇವೆ. ಆಗು ಹೋಗುಗಳ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ರಾಹುಲ್ ಗಾಂಧಿ ಹಾಗೂ ಡಿಕೆಶಿ ಅಮೇರಿಕಾದಲ್ಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ಅವರು ಭೇಟಿಯಾಗಿದ್ದರಲ್ಲಿ ಕುತೂಹಲ ಏನಿಲ್ಲ. ಅವರು ನಮ್ಮ ನಾಯಕರು ರಾಹುಲ್ ಅವರು ಅಲ್ಲಿದ್ದಾಗ ಭೇಟಿಯಾಗಿದ್ದಾರೆ.. ಭೇಟಿಯಾಗಿದ್ದು ಖುಷಿ ಇದೆ. ಕುತೂಹಲ ಏನಿಲ್ಲ. ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಆಗಿಲ್ಲ. ನೀವು ಅದನ್ನು ಪದೇ ಪದೇ ಕೇಳಬೇಡಿ ಎಂದು ಸಂತೋಷ್ ಲಾಡ್ ಗರಂ ಆಗಿದ್ದಾರೆ.
ಇದರ ಬಗ್ಗೆ ಬಿಜೆಪಿಯವರಿಗೆ ಕುತೂಹಲ ಇದೆ. ಹರಿಯಾಣ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಚುನಾವಣೆ ಆದ ಮೇಲೆ ಮೋದಿ ಸರ್ಕಾರ ಅಲ್ಲಾಡುತ್ತದೆ. ಇದನ್ನು ಬಿಜೆಪಿಯವರಿಗೆ ಕೇಳಬೇಕು. ಈಗಾಗಲೇ ಬಿಜೆಪಿಯವರ ನಂಬರ್ ಕಡಿಮೆ ಇವೆ. ಸದ್ಯದ ಸರ್ವೆ ರಿಪೋರ್ಟ್ ಗಳು ಎಲ್ಲಾ ಕಡೆ ಬಿಜೆಪಿ ಸೋಲುತ್ತದೆ ಎಂದು ಹೇಳಿವೆ. ಹೀಗಾಗಿ ಅವರಿಗೆ ಭಯ ಇದೆ ನಮಗಲ್ಲ. ನಾವು 136 ಜನ ಶಾಸಕರಿದ್ದೇವೆ ಐದು ವರ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಜನರಲ್ ಸೆಕ್ರೆಟರಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಎಲ್ಲ ಶಾಸಕರು, ಸಚಿವರು, ಸಂಸದರು, ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯ ಪರವಾಗಿದ್ದೇವೆ. ನಾವು ಅವರ ಪರವಾಗಿ ಗಟ್ಟಿಯಾಗಿರುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಖಾನಾಪುರದ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ, ಸತೀಶ ಜಾರಕಿಹೊಳಿ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಅವರು ಆ ರೀತಿ ಹೇಳಿದ್ದಕ್ಕೆ ಬಿಜೆಪಿಯವರನ್ನೇ ಕೇಳಬೇಕು. ಅವರು ನನ್ನ ಕಂಟ್ರೋಲ್‌ನಲ್ಲಿ ಇಲ್ಲ ಎಂದಿದ್ದಾರೆ.
ದೀಪಾವಳಿಗೆ ರಾಜ್ಯ ಸರ್ಕಾರ ಪತನ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಕೇಂದ್ರ ಸರ್ಕಾರ ಪತನ ಆಗಲಿದೆ. ಇದನ್ನೂ ಸಿ.ಟಿ.ರವಿ ಅವರನ್ನೂ ಕೇಳಬೇಕು. ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಇವರು ಎರಡು ವರ್ಷದಿಂದ ಹೇಳುತ್ತಿದ್ದಾರೆ. ಇದೇನು ಹೊಸದಾ? ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.