- Advertisement -
ಧಾರವಾಡ : ರಾಜ್ಯಸರ್ಕಾರವು ಜನಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ನೂತನ ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಯುವನಿಧಿ ಯೋಜನೆ ಜಾರಿಗೆ ಸಿದ್ಧತೆಯಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಇಂದು (ಆ.15) ಬೆಳಿಗ್ಗೆ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.
ರಾಜ್ಯ ಸರಕಾರವು ನುಡಿದಂತೆ ನಡೆದಿದ್ದು, ಜನಪರ ಗ್ಯಾರೆಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದ್ದು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ. ಬಡ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಈ ಯೋಜನೆ ವರದಾನವಾಗಿದೆ. ಶಕ್ತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 1.51 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ. ರೂ. 30.77 ಕೋಟಿ ಮೌಲ್ಯದ ಸೌಲಭ್ಯವನ್ನು ಪಡೆದಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಒಡತಿಗೆ ಮಾಹೆಯಾನ ರೂ.2,000/- ನೀಡುವ ಯೋಜನೆಗೆ ನೋಂದಣಿ ಕಾರ್ಯ ಆರಂಭವಾಗಿರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 3,82,523 ಮಹಿಳೆಯರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಬಳಕೆದಾರರಿಗೆ ಗರಿಷ್ಟ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 5,44,181 ಗೃಹ ಬಳಕೆದಾರರಿದ್ದು, ಇದರಲ್ಲಿ 4,18,250 ಗ್ರಾಹಕರು ಈಗಾಗಲೇ ಪ್ರಯೋಜನ ಪಡೆದುಕೊಂಡಿರುತ್ತಾರೆ. ಯುವನಿಧಿ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು.
ಅನ್ನಭಾಗ್ಯ ಯೋಜನೆಯಡಿ ಯಾರೂ ಸಹ ಹಸಿವಿನಿಂದ ಬಳಲದಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 3,87,124 ಬಿ.ಪಿ.ಎಲ್. ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಲಾಗಿದೆ. ಬಿ.ಪಿ.ಎಲ್. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ರೂ.170/- ಗಳಂತೆ ರೂ.16.67 ಕೋಟಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಭಾರತವು ಕಳೆದ 77 ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ. ಪಕ್ಷಾತೀತವಾಗಿ ನಮ್ಮ ಎಲ್ಲ ಹಿರಿಯ ನಾಯಕರು ಮತ್ತು ಮುಖ್ಯಸ್ಥರು ದೇಶವನ್ನು ಅಭಿವೃದ್ಧಿಗಾಗಿ ಮುನ್ನಡೆಸಿದ್ದಾರೆ. ಭಾರತವು ಈಗ ಜಗತ್ತಿನ 5ನೇ ಬಲಿಷ್ಠ ರಾಷ್ಟ್ರವಾಗಿದೆ. ಯುವಕರು ದೇಶ ಸೇವೆಗೆ ಮುಂದಾಳತ್ವ ವಹಿಸಬೇಕು. ರಾಜಕೀಯವನ್ನು ಸೇರುವ ಮೂಲಕ ದೇಶದ ಅಭಿವೃದ್ಧಿಗೆ ಮತ್ತು ಸಮರ್ಥ ನಾಯಕತ್ವಕ್ಕೆ ಮುಂದಾಗಬೇಕೆಂದು ಸಚಿವರು ಯುವ ಸಮೂಹಕ್ಕೆ ಕರೆ ನೀಡಿದರು.
- Advertisement -