ಬಿಜೆಪಿಯನ್ನು ಏಕೆ ಸೋಲಿಸಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಪೂರ್ಣ ಸ್ಪಷ್ಟತೆ ಇರಲಿ. ಈ ಕುರಿತಾಗಿ ಜನರ ಮುಂದೆ ಗಟ್ಟಿಯಾಗಿ ಮಾತನಾಡಬೇಕು. ಆಗ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧ್ಯ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಹೇಳಿದರು.
ಬುಧವಾರ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಚೇರಿ ಸಭೆಯಲ್ಲಿ ಸಂತೋಷ್ ಲಾಡ್ ಮಾತನಾಡಿದರು. ದೇಶದ ಸಂವಿಧಾನವನ್ನು ಹಂತ ಹಂತವಾಗಿ ಬದಲಾಯಿಸುವ ಸಂಚು ನಡೆದಿದೆ. ಈ ತಿರುವುಗಳಿಗೆ ವಿರೋಧವಾಗಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಹೋರಾಟ ನಡೆಸುತ್ತಿದ್ದಾರೆ. ಅವರ ಈ ಹೋರಾಟವನ್ನು ಕಾರ್ಯಕರ್ತರು ಆಳವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
1947ರಲ್ಲಿ ಭಾರತದ ಸಾಲ ₹52 ಲಕ್ಷ ಕೋಟಿ ಇದ್ದರೆ, ಕಳೆದ 11 ವರ್ಷಗಳಲ್ಲಿ ಅದು ₹211 ಲಕ್ಷ ಕೋಟಿಗೆ ಏರಿದೆ. ಇದು ಜನರಿಗೆ ತಿಳಿಯಲೇಬೇಕು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ, ಅದರ ಲಾಭಗಳು ಮತ್ತು ಯಶಸ್ಸುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಗ್ಯಾರಂಟಿ ಯೋಜನಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಮಹರೂಸ್ ಖಾನ್ ಅವರು ಕೂಡ ಮಾತನಾಡಿದ್ದಾರೆ. ಶಕ್ತಿ ಯೋಜನೆಯ ಫಲಿತಾಂಶವಾಗಿ ರಾಜ್ಯದ ಅನೇಕ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಈ ಕುರಿತಾಗಿ ಮನೆ ಮನೆಗೆ ಹೋಗಿ ಸಮಜಾಯಿಷಿ ನೀಡಬೇಕು ಎಂದಿದ್ದಾರೆ.
ಇನ್ನು ಬಿಜೆಪಿಯನ್ನು ಎದುರಿಸಲು ತಾತ್ವಿಕ, ಆರ್ಥಿಕ ಹಾಗೂ ಜನಪರ ಮಟ್ಟದಲ್ಲಿ ಸಜ್ಜಾಗಬೇಕೆಂದು ಸಚಿವ ಸಂತೋಷ್ ಲಾಡ್ ಸಂದೇಶ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಮಾತುಗಳು ಕಾರ್ಯರೂಪಕ್ಕೆ ಬರುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ