ಮಹಾರಾಷ್ಟ್ರದ ಸತಾರಾದಲ್ಲಿ ಯುವ ವೈದ್ಯೆಯೊಬ್ಬರ ಆತ್ಮಹತ್ಯೆ ದೇಶವನ್ನೇ ಕಂಗೆಡಿಸಿದೆ. ಅತ್ಯಾಚಾರ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಪ್ರಕರಣ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಘಟನೆಯನ್ನು ಸಂಸ್ಥಾಗತ ಹತ್ಯೆ ಎಂದು ಕರೆದಿದ್ದಾರೆ. ಬಿಜೆಪಿ ಸರ್ಕಾರದ ಅಮಾನವೀಯ ಮುಖ ಬಯಲಾಗಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಾಲ್ಟನ್ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ವೈದ್ಯೆ ಡಾ. ಸಂಪದಾ ಅತ್ಯಾಚಾರ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಡಾ. ಸಂಪದಾ ಅವರ ಡೆತ್ ನೋಟ್‌ನಲ್ಲಿ ಅವರು ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ಮತ್ತು ಪ್ರಶಾಂತ್ ಬಂಕರ್ ಎಂಬ ಇಬ್ಬರಿಂದ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಘಟನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಆತ್ಮಹತ್ಯೆಯಲ್ಲ, ಇದು ಸಂಸ್ಥಾಗತ ಹತ್ಯೆ. ಸಾರ್ವಜನಿಕರನ್ನು ರಕ್ಷಿಸಬೇಕಾದ ಸರ್ಕಾರವೇ ಅಪರಾಧಿಗಳಿಗೆ ರಕ್ಷಾಕವಚ ನೀಡಿದೆ. ಇದು ಬಿಜೆಪಿ ಸರ್ಕಾರದ ಅಮಾನವೀಯ ಮತ್ತು ಸಂವೇದನಾಶೂನ್ಯ ಮುಖವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸಂತ್ರಸ್ತೆಯ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನ್ಯಾಯ ಹೋರಾಟದಲ್ಲಿ ನಾವು ಕುಟುಂಬದೊಂದಿಗೆ ನಿಲ್ಲುತ್ತೇವೆ. ಭಾರತದ ಪ್ರತಿಯೊಬ್ಬ ಹೆಣ್ಣುಮಗಳಿಗೂ ಭಯವಿಲ್ಲದ ಬದುಕು ಬೇಕು, ನ್ಯಾಯ ಬೇಕು ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಸಬ್-ಇನ್ಸ್‌ಪೆಕ್ಟರ್ ಬದನೆ ಮತ್ತು ಬಂಕರ್ ಇಬ್ಬರೂ ಪ್ರಭಾವಿ ಸಂಪರ್ಕ ಹೊಂದಿರುವವರಾಗಿದ್ದು, ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪದ ಸಾಧ್ಯತೆಗಳೂ ಕೇಳಿಬರುತ್ತಿವೆ. ಈ ಘಟನೆ ಬಳಿಕ ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜಕೀಯ ಪಕ್ಷಗಳು ಕಿಡಿಕಾರುತ್ತಿದ್ದು, ರಾಹುಲ್ ಗಾಂಧಿ ಅವರ ಹೇಳಿಕೆ ಈ ವಿವಾದಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.
ವರದಿ : ಲಾವಣ್ಯ ಅನಿಗೋಳ

