ಬೆಳಗಾವಿ : ಸೋಮವಾರ ತಾಂತ್ರಿಕ ದೋಷದಿಂದ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ ರಾಹುಲ್ ಜಾರಕಿಹೊಳಿ ಅವರು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಜಿಲ್ಲಾ ಆಸ್ಪತ್ರೆಯ ಲಿಫ್ಟ್‌ನಲ್ಲಿ ಸುಮಾರು ಅರ್ಧ ಗಂಟೆ ಸಿಲುಕಿಕೊಂಡರು.
ತಾಂತ್ರಿಕ ಕಾರಣಗಳಿಂದ ರಾಹುಲ್ ಮತ್ತು ಕಾರ್ಯಕರ್ತರು ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ಭದ್ರತಾ ಸಿಬ್ಬಂದಿ ಲಿಫ್ಟ್ ಅನ್ನು ತೆರೆಯಲು ಸುಮಾರು 30 ನಿಮಿಷಗಳನ್ನು ತೆಗೆದುಕೊಂಡರು. ಲಿಫ್ಟ್ ನಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಜಾರಕಿಹೊಳಿ, ಲಿಫ್ಟ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಅದರಲ್ಲಿ ನಾವು ಸುಮಾರು 15 ಮಂದಿ ಇದ್ದೇವು. ಆದ್ದರಿಂದ ಲಿಫ್ಟ್ ಕೂಡ ಓವರ್‌ಲೋಡ್ ಆಗಿರಬಹುದು ಎಂದು ತಿಳಿಸಿದರು.
ಇಂದು ನಾಗರ ಪಂಚಮಿ ಹಿನ್ನೆಲೆಯಲ್ಲಿ ಬಂಧುತ್ವ ವೇದಿಕೆ ವತಿಯಿಂದ ನಾಗಪಂಚಮಿಯನ್ನು ಬಸವ ಪಂಚಮಿ ಎಂದು ಆಚರಿಸಲಾಗಿತ್ತು. ಬಳಿಕ ರಾಹುಲ್ ಸತೀಶ್ ಜಾರಕಿಹೊಳಿ ವೇದಿಕೆಯ ಕಾರ್ಯಕರ್ತರೊಂದಿಗೆ ಬಿಮ್ಸ್ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ರೋಗಿಗಳಿಗೆ ಹಾಲು, ಹಣ್ಣು ಹಂಪಲು ವಿತರಿಸಿ ಮೂಢನಂಬಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ವಾಪಾಸ್ ಆಗುವ ಸಂದರ್ಭದಲ್ಲಿ ಲಿಫ್ಟ್ ನಲ್ಲಿ ಸಿಲುಕಿಗೊಂಡಿದ್ದರು.
ನಾಗಪಂಚಮಿಯ ಅವಕಾಶವನ್ನು ಬಳಸಿಕೊಂಡು ಬಸವ ಪಂಚಮಿ ಎಂದು ಆಚರಿಸಿ ಮೂಢನಂಬಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇವೆ, ಲಕ್ಷಾಂತರ ಮಕ್ಕಳು ಪೌಷ್ಟಿಕಾಂಶದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ನೀಡಬಹುದಾದ ಹಾಲು ನಾಗಪಂಚಮಿಯಂದು ಅಪಾರ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಇದರ ಬಗ್ಗೆ ಅರಿವು ಮೂಡಿಸಲು ನಾವು ರಾಜ್ಯಾದ್ಯಂತ ಬಸವ ಪಂಚಮಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.