ಬೆಳಗಾವಿ: ಲೋಕಸಭೆ ಚುನಾವಣೆ ವೇಳೇ ಒಗ್ಗಟ್ಟಿನ ಮಂತ್ರ ಪಠಿಸಿದ್ದ ಕಾಂಗ್ರೆಸ್ ನಾಯಕರ ಮಧ್ಯೆ ಈಗ ಭಿನ್ನಾಭಿಪ್ರಾಯಗಳು ಮೂಡಿವೆ. ಅದರಲ್ಲೂ, ಮುಖ್ಯಮಂತ್ರಿ ಬದಲಾವಣೆ ವಿಚಾರವು ಮುನ್ನೆಲೆಗೆ ಬಂದಿದ್ದು, ಸ್ವಾಮೀಜಿಗಳು ಕೂಡ ಇದರ ಚರ್ಚೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ, ‘2028ರಲ್ಲಿ ನಾನು ಕೂಡ ಮುಖ್ಯಮಂತ್ರಿಯಾಗಲು ಹಕ್ಕು ಮಂಡಿಸುತ್ತೇನೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, “2028ರಲ್ಲಿ ನಾನು ಕೂಡ ಸಿಎಂ ಆಗುತ್ತೇನೆ. ಆಗಿನ ಚುನಾವಣೆ ಫಲಿತಾಂಶದ ಬಳಿಕದ ಪರಿಸ್ಥಿತಿ ನೋಡಿಕೊಂಡು ಸಿಎಂ ಸ್ಥಾನಕ್ಕೆ ಹಕ್ಕು ಚಲಾವಣೆ ಮಾಡುತ್ತೇನೆ ಎಂದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದುಹೋಗಿದೆ. ಸಿಎಂ ಬದಲಾವಣೆ ವಿಚಾರವು ಹೈಕಮಾಂಡ್ ತೀರ್ಮಾನವಾಗಿದೆ. ಡಿಸಿಎಂಗಳ ವಿಚಾರವೂ ಚುನಾವಣೆಗೆ ಮೊದಲು ಕೇಳಿಬಂದಿತ್ತು. ಈಗ ಮಾಡಬೇಕಾ, ಬೇಡವಾ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ” ಎಂದು ಹೇಳಿದರು.

