ಬ್ಯಾಂಕ್‌ನಲ್ಲಿ ಇಟ್ಟರೂ ಜನರ ಹಣ, ಒಡವೆಗೆ ಸೇಫ್ಟಿಯೇ ಇಲ್ಲದಂತಾಗಿದೆ. ಯಾಕಂದ್ರೆ, ವಿಜಯಪುರ ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆ, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬರೋಬ್ಬರಿ 8 ಕೋಟಿ ನಗದು, 50 ಕೆ.ಜಿ.ಗೂ ಹೆಚ್ಚು ಚಿನ್ನವನ್ನು ದೋಚಲಾಗಿದೆ.
ಪಿಸ್ತೂಲ್, ಮಾರಕಾಸ್ತ್ರಗಳೊಂದಿಗೆ ಸಂಜೆ 6.30ರ ಸುಮಾರಿಗೆ, 5ಕ್ಕೂ ಹೆಚ್ಚು ಮುಸುಕುಧಾರಿ ದರೋಡೆಕೋರರು ಎಂಟ್ರಿ ಕೊಟ್ಟಿದ್ದಾರೆ. ಮಿಲಿಟರಿ ಮಾದರಿಯ ಸಮವಸ್ತ್ರ ಧರಿಸಿದ್ದ ದರೋಡೆಕೋರರು, ಬಂದೂಕು ಮಾರಕಾಸ್ತ್ರಗಳನ್ನ ತೋರಿಸಿ ಹೆದರಿಸಿದ್ದಾರೆ. ಬಳಿಕ ಬ್ಯಾಂಕ್ ಮ್ಯಾನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ, ರೂಂನಲ್ಲಿ ಕೂಡಿ ಹಾಕಿದ್ದಾರೆ. ನಗದು, ಚಿನ್ನಾಭರಣ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ.
KA-24 DH 2456 ನಂಬರಿನ ಕಾರಿನಲ್ಲಿ ಬಂದಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಕಾರಿನ ಫೋಟೋ ಕೂಡ ಲಭ್ಯವಾಗಿದೆ. ದರೋಡೆ ಬಳಿಕ ಬೇರೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ದರೋಡೆ ಬಳಿಕ ಮಹಾರಾಷ್ಟ್ರದತ್ತ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ, ಸೊಲ್ಲಾಪುರ ಜಿಲ್ಲೆಯ ಹುಲಿಜಂತಿ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದಾಗ, ಕುರಿಗಳಿಗೆ ದರೋಡೆಕೋರರ ಕಾರು ಡಿಕ್ಕಿಯಾಗಿದೆ. ಪ್ರಶ್ನಿಸಿದ ಗ್ರಾಮಸ್ಥರಿಗೆ ಕಾರಿನಲ್ಲಿದ್ದ ಓರ್ವ ದರೋಡೆಕೋರ, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವುದು ಗೊತ್ತಾಗಿದೆ.
ಸದ್ಯ, ಎಸ್‌ಬಿಐ ಬ್ಯಾಂಕ್‌ನಲ್ಲಿ ಪೊಲೀಸರ ತಂಡ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಬ್ಯಾಂಕ್ ಸುತ್ತಮುತ್ತಲ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗ್ತಿದೆ. ಕಳೆದ ಮೇ ತಿಂಗಳಲ್ಲಿ ಮನಗೂಳಿಯ ಕೆನರಾ ಬ್ಯಾಂಕ್‌ನಲ್ಲೂ ಕಳ್ಳತನ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ, ವಿಜಯಪುರ ಜಿಲ್ಲೆಯಲ್ಲೇ ಮತ್ತೊಂದು ಘಟನೆ ನಡೆದಿದೆ.