Wednesday, October 15, 2025

Latest Posts

SBI ದರೋಡೆ: ಪಾಳು ಮನೆಯಲ್ಲಿ 41 ಲಕ್ಷ ನಗದು, 6.5 ಕೆಜಿ ಚಿನ್ನ ಪತ್ತೆ

- Advertisement -

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದ್ದ ಭಾರೀ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯೊಂದರ ಮೇಲ್ಚಾವಣಿಯಲ್ಲಿ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.

ಮಂಗಳವೇಡ ಗ್ರಾಮಸ್ಥರು ಮನೆಯ ಮೇಲ್ಚಾವಣಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಂಗಳವೇಡ ಪೊಲೀಸರು ವಿಜಯಪುರ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿಗೆ ವರದಿ ಸಲ್ಲಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬ್ಯಾಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಮಾಹಿತಿಯ ಪ್ರಕಾರ, ಪತ್ತೆಯಾದ ಬ್ಯಾಗ್‌ನಲ್ಲಿದ್ದು 6.54 ಕೆಜಿ ಚಿನ್ನಾಭರಣ ಹಾಗೂ 41.4 ಲಕ್ಷ ರೂ. ನಗದು. ಚಡಚಣ ಎಸ್‌ಬಿಐ ಶಾಖೆಯಲ್ಲಿ ಸೆಪ್ಟೆಂಬರ್ 16ರಂದು ನಡೆದ ದರೋಡೆಯಲ್ಲಿ ಒಟ್ಟು 1.5 ಕೋಟಿ ರೂ. ನಗದು ಹಾಗೂ 20 ಕೆಜಿಗೂ ಹೆಚ್ಚಿನ ಚಿನ್ನಾಭರಣ ದೋಚಲಾಗಿತ್ತು.

ದರೋಡೆ ನಡೆದ ದಿನವೇ ಆರೋಪಿಗಳು ಬಳಸಿದ ಇಕೋ ವಾಹನವು ಹುಲಜಂತಿ ಗ್ರಾಮದಲ್ಲೇ ಪತ್ತೆಯಾಗಿತ್ತು. ಆ ವೇಳೆ ಸ್ಥಳೀಯರು ವಾಹನ ಪ್ರಶ್ನಿಸಿದಾಗ, ಆರೋಪಿಗಳು ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಸೆಪ್ಟೆಂಬರ್ 16ರಂದು ಸಂಜೆ ನಡೆದ ದರೋಡೆಯಲ್ಲಿ, ದರೋಡೆಕೋರರು ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಹಾಗೂ ಕೆಲ ಗ್ರಾಹಕರ ಕೈಕಾಲು ಕಟ್ಟಿಹಾಕಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ವೇಳೆ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷ್ಯ ಕೂಡ ದರೋಡೆಕೋರರಿಗೆ ನೆರವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿರುವ ದರೋಡೆಕೋರರಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss