ಸಿಎಂ ಕ್ಷೇತ್ರದಲ್ಲೇ ಶಾಲಾ ಅಕ್ರಮ? ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಿಂದ ಸಂಪ್‌ನಿಂದ ನೀರು ಸೇದಿಸಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆಯೆಂಬ ವಿಷಯ ಬೆಳಕಿಗೆ ಬಂದು ಆಕ್ಷೇಪ ಎದುರಿಸುತ್ತಿದೆ. ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ನವೆಂಬರ್ 20ರಂದು ಗ್ರಾಮಸ್ಥ ಸಿದ್ದರಾಜು ಅವರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಷಯ ಬಹಿರಂಗವಾಗಿದೆ.

ಸಿದ್ದರಾಜು ಅವರು ತಮ್ಮ ಮಗಳನ್ನು ಅಂಗನವಾಡಿಯಿಂದ ಕರೆದುಕೊಂಡು ಬರಲು ಶಾಲೆಗೆ ಬಂದಾಗ, ಮಕ್ಕಳು ಸಂಪ್‌ನೊಳಗೆ ನೀರು ಸೇದುತ್ತಿರುವುದನ್ನು ಗಮನಿಸಿದ್ದಾರೆ. ಪ್ರಾಥಮಿಕವಾಗಿ, ಯಾರಾದರೂ ಸಂಪ್‌ಗೆ ಬಿದ್ದಿರಬಹುದೆಂದು ಅವರು ಭಾವಿಸಿದರೂ, ವಿಚಾರಣೆ ಮಾಡಿದಾಗ ಶಿಕ್ಷಕರೇ ಮಕ್ಕಳಿಗೆ ನೀರು ತರಲು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ್ದಾರೆ ಎಂಬುದು ತಿಳಿದುಬಂದಿದೆ. ಘಟನೆಯ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಸಿದ್ದರಾಜು, ಬ್ಲಾಕ್ ಶಿಕ್ಷಣ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಶಿಕ್ಷಕರ ಈ ವರ್ತನೆಗೆ ಸಿದ್ದರಾಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಕೋಲಾರದಲ್ಲಿ ವಿದ್ಯಾರ್ಥಿಯೊಬ್ಬ ಸಂಪ್‌ಗೆ ಬಿದ್ದು ಮೃತಪಟ್ಟ ಘಟನೆ ಉಲ್ಲೇಖಿಸಿ, ಮಕ್ಕಳಿಗೆ ಇಂತಹ ಅಪಾಯಕಾರಿ ಕಾರ್ಯ ನೀಡುವುದು ಗಂಭೀರ ನಿರ್ಲಕ್ಷ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಶಾಲೆಯಲ್ಲಿ ಶೌಚಾಲಯ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕೆಂದು ಒತ್ತಾಯಿಸಿದ್ದಾರೆ. ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಡಿಡಿಪಿಐ ಯವರಿಗೆ ಮನವಿ ಮಾಡಿದ್ದಾರೆ.

ಈ ನಡುವೆ, ಘಟನೆಯ ಬಗ್ಗೆ ತನಿಖೆ ನಡೆಸಿ ಸೋಮವಾರದೊಳಗೆ ವರದಿ ಸಲ್ಲಿಸುವಂತೆ ಬಿಇಒಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಎಸ್.ಟಿ. ಜವರೇಗೌಡ ತಿಳಿಸಿದ್ದಾರೆ. ತನಿಖಾ ವರದಿ ಆಧಾರದ ಮೇಲೆ ಶಿಕ್ಷಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಘಟನೆ ಸಾಮಾಜಿಕ ವಲಯ ಮತ್ತು ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು, ಶಾಲಾ ನಿರ್ವಹಣೆ, ವಿದ್ಯಾರ್ಥಿಗಳ ಭದ್ರತೆ ಮತ್ತು ಶಿಕ್ಷಕರ ಜವಾಬ್ದಾರಿಯ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author