ಬಿಹಾರ ವಿಧಾನಸಭಾ ಚುನಾವಣೆ ಗರಿಗೆದರಿದಂತೆ, ಮಹಾಘಟಬಂಧನದಲ್ಲಿನ ಸೀಟು ಹಂಚಿಕೆ ವಿವಾದ ಮತ್ತಷ್ಟು ತೀವ್ರವಾಗುತ್ತಿದೆ. ಸೀಟು ಹಂಚಿಕೆ ಕುರಿತು ಇನ್ನೂ ಪೂರ್ಣ ಒಮ್ಮತ ಮೂಡದಿದ್ದರೂ, RJD 143 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಯಾಗಿದೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತನ್ನ ಪರಂಪರೆಯ ರಾಘೋಪುರ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ. ಇನ್ನು ಪಕ್ಷದ ಪ್ರಮುಖ ಮುಖಂಡರಲ್ಲಿ ಮದೇಪುರದಿಂದ ಚಂದ್ರಶೇಖರ್, ಮೊಕಾಮಾದಿಂದ ವೀಣಾ ದೇವಿ ಮತ್ತು ಝಾಝಾ ಕ್ಷೇತ್ರದಿಂದ ಉದಯ ನಾರಾಯಣ್ ಚೌಧರಿ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.
2020ರ ವಿಧಾನಸಭಾ ಚುನಾವಣೆಯಲ್ಲಿ RJD 144 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ, ಮಹಾಘಟಬಂಧನದ ಒಳಸಂಘರ್ಷದ ನಡುವೆಯೂ, ಒಂದು ಕ್ಷೇತ್ರ ಕಡಿಮೆ ಮಾಡಿದ್ದು 143 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. RJD ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸುವ ಮೊದಲೇ ಎಲ್ಲ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ವಿತರಿಸಿದ್ದರಿಂದ, ಮಹಾಘಟಬಂಧನದಲ್ಲಿ ನಿರ್ಣಾಯಕ ಒಗ್ಗಟ್ಟು ಇಲ್ಲದಿರುವುದು ಸ್ಪಷ್ಟವಾಗಿದೆ.
ಈ ನಡುವೆ ಕಾಂಗ್ರೆಸ್ ಪಕ್ಷವು ಸಹ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆರು ಅಭ್ಯರ್ಥಿಗಳ ಹೆಸರುಗಳಿದ್ದು, ಇದರಿಂದಾಗಿ ಕಾಂಗ್ರೆಸ್ ಪ್ರಕಟಿಸಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 60ಕ್ಕೆ ಏರಿದೆ. ಹೊಸದಾಗಿ ಬಿಡುಗಡೆಯಾದ ಆರು ಅಭ್ಯರ್ಥಿಗಳ ಪಟ್ಟಿಯ ಪ್ರಕಾರ, ಕಾಂಗ್ರೆಸ್ ಪಕ್ಷವು ವಾಲ್ಮೀಕಿ ನಗರದಿಂದ ಸುರೇಶ ಪ್ರಸಾದ್ ಕುಶ್ವಾಹ, ಅಮೌರ್‌ನಿಂದ ಜಲೀಲ್ ಮಸ್ತಾನ್, ಬರಾರಿಯಿಂದ ತೌಕೀರ್ ಆಲಂ, ಕಹ್ಲಗಾಂವ್‌ನಿಂದ ಪ್ರವೀಣ್ ಸಿಂಗ್ ಕುಶ್ವಾಹ ಮತ್ತು ಸಿಕಂದ್ರ ಕ್ಷೇತ್ರದಿಂದ ವಿನೋದ್ ಚೌಧರಿ ಅವರನ್ನು ಕಣಕ್ಕಿಳಿಸಿದೆ.
ಬಿಹಾರ ವಿಧಾನಸಭಾ ಚುನಾವಣೆ ಎರಡನೇ ಹಂತದ ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದ್ದು, ಮಹಾಘಟಬಂಧನದ ಅಂತರಿಕ ಸಂಘರ್ಷ ಚುನಾವಣೆಗೂ ಮುನ್ನಲೇ ಪ್ರಬಲವಾಗಿದೆ. ಚುನಾವಣೆಗಳು ನವೆಂಬರ್ 6 ಮತ್ತು 11ರಂದು ನಡೆಯಲಿದ್ದು, ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ. ಈ ಬೆಳವಣಿಗೆಗಳು ಒಟ್ಟಾರೆಯಾಗಿ ಮಹಾಘಟಬಂಧನದಲ್ಲಿನ ಒಗ್ಗಟ್ಟಿನ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ.
ವರದಿ : ಲಾವಣ್ಯ ಅನಿಗೋಳ