ನವೆಂಬರ್ ಕ್ರಾಂತಿಯ ಚರ್ಚೆ ಮಧ್ಯೆ ಈಗ ಹೊಸ ರಾಜಕೀಯ ಸದ್ದು – ಸಚಿವರ ಸೀಕ್ರೆಟ್ ಸಭೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಅವರ ನಿವಾಸದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಂಭತ್ತು ಗಂಟೆಗೂ ಹೆಚ್ಚು ಕಾಲ ಮುಚ್ಚಿದ ಬಾಗಿಲ ಸಭೆ ನಡೆಸಿದ್ದಾರೆ. ಇಬ್ಬರೂ ಕಾಂಗ್ರೆಸ್‌ನ ಹಿರಿಯ ಮುಖಗಳು, ದಲಿತ ಸಮುದಾಯದ ಪ್ರಬಲ ನಾಯಕರು. ಈ ಭೇಟಿಯಿಂದ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಜೋರಾಗಿದೆ.
ಸಭೆಯ ನಂತರ ಮಾತನಾಡಿದ ಪರಮೇಶ್ವರ್, ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿ. ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಬಗ್ಗೆ ಯಾರೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮಹಾದೇವಪ್ಪ ಕೂಡ ಮಾತನಾಡಿ, ಯಾರೂ ಯಾರಿಗೂ ಅನಿವಾರ್ಯರಲ್ಲ, ಹೊಗಳುಭಟ್ಟತನ ಸರ್ವಾಧಿಕಾರವನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಸಚಿವ ಕೆ.ಎನ್. ರಾಜಣ್ಣ ಅವರ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಎನ್ನುವ ಹೇಳಿಕೆಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಸಭೆಯ ಬಳಿಕ ಇಬ್ಬರೂ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದರು. ನನ್ನ ಸಿದ್ದಾರ್ಥ ಕಾಲೇಜಿನ ಕಟ್ಟಡ ನಿರ್ಮಾಣದ ವಿಷಯ ಚರ್ಚಿಸಲು ಬಂದಿದ್ದೆ, ಸಚಿವನಾಗಿ ಅಲ್ಲ, ಕಾಲೇಜಿನ ಅಧ್ಯಕ್ಷನಾಗಿ ಬಂದಿದ್ದೆ ಎಂದು ಪರಮೇಶ್ವರ್ ಹೇಳಿದರು. ಇದನ್ನೇ ಬೆಂಬಲಿಸಿದ ಮಹಾದೇವಪ್ಪ, ತುಮಕೂರಿನ ಸಹಕಾರ ಸಂಘಕ್ಕೆ ಅನುದಾನ ಕೋರಿ ಪತ್ರ ನೀಡಿದ್ದರು, ಬೇರೆ ರಾಜಕೀಯ ಮಾತೇ ನಡೆದಿಲ್ಲ ಎಂದು ಹೇಳಿದ್ದಾರೆ. ಏನೇ ಸಮರ್ಥನೆ ಮಾಡಿಕೊಂಡರು ರಾಜಕೀಯ ವಲಯದಲ್ಲಿ ಊಹಾಪೋಹಗಳು ಮುಂದುವರಿದಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

