ಹೈಕಮಾಂಡ್‌ನ ಸೀಕ್ರೆಟ್ ಸಭೆ : ಸಿಎಂ ಕುರ್ಚಿಗೆ ಹೊಸ ತಂತ್ರ!

ಕರ್ನಾಟಕದ ರಾಜಕೀಯದಲ್ಲಿ ಮತ್ತೆ ಚಟುವಟಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಡಿಸೆಂಬರ್ 6ರಂದು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆ ನಡೆಸಿದೆ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದರು.

ಸಭೆಯ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರತಿಕ್ರಿಯಿಸಿ, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಚರ್ಚೆ ನಡೆದಿದೆ. ಆದರೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ಈ ಸಭೆಯಲ್ಲಿ ರಾಜ್ಯದ ಮುಂದಿನ ರಾಜಕೀಯ ಹೆಜ್ಜೆಗಳು ಹಾಗೂ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ. ಆದರೆ ನಿರ್ಧಾರವನ್ನು ಪ್ರಕಟಿಸಲು ಇದು ಸೂಕ್ತ ಸಮಯವಲ್ಲವೆಂದು ತಿಳಿಸಲಾಗಿದೆ. ಮುಂದಿನ ಸಭೆಯ ನಂತರ ಅಂತಿಮ ತೀರ್ಮಾನ ಹೊರಬರುವುದು ನಿರೀಕ್ಷಿಸಲಾಗಿದೆ.

ಇದರ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಎರಡನೇ ಉಪಾಹಾರ ಸಭೆ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಎರಡೂ ನಾಯಕರು ‘ನಾವು ಸಹೋದರರು’ ಎಂದು ಹೇಳಿಕೊಂಡರೂ, ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ, ಎಂದು ಸಿದ್ದರಾಮಯ್ಯ ಅವರ ಹೊಸ ಹೇಳಿಕೆ, ಹಾಗೂ ಹಿಂದೆ ಅವರು ನೀಡಿದ್ದ ನಾನೇ ಪೂರ್ಣಾವಧಿ ಸಿಎಂ ಎಂಬ ಮಾತುಗಳೊಂದಿಗೆ ಹೋಲಿಕೆ ಮಾಡಿದಾಗ, ರಾಜ್ಯ ರಾಜಕೀಯದಲ್ಲಿ ಮತ್ತೆ ಅಸಮಾಧಾನ ಹೆಚ್ಚಿರುವ ಸೂಚನೆ ದೊರಕಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಸದ್ಯಕ್ಕೆ ತಣ್ಣಗಾಗಿದ್ದರೂ, ವಿವಾದವು ಮತ್ತೊಮ್ಮೆ ಭುಗಿಲೇಳುವ ಸಾಧ್ಯತೆಗಳನ್ನು ರಾಜಕೀಯ ವಲಯ ತಳ್ಳಿಹಾಕಿಲ್ಲ. ಈ ಹಿನ್ನೆಲೆ, ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮತ್ತೊಂದು ಸುತ್ತಿನ ಉಪಾಹಾರ ಸಭೆಯನ್ನು ಏರ್ಪಡಿಸಲು ತಯಾರಿ ನಡೆಸಿದೆ. ಇದರ ಜೊತೆಗೆ, ದೆಹಲಿಯಲ್ಲಿ ಮೇಲ್ಮಟ್ಟದ ನಾಯಕರ ಜೊತೆ ಗಂಭೀರ ಚರ್ಚೆ ನಡೆಯಲಿರುವುದು ಸ್ಪಷ್ಟವಾಗಿದೆ.

ಸದ್ಯಕ್ಕೆ ಎರಡೂ ನಾಯಕರು ಹೈಕಮಾಂಡ್ ಸೂಚನೆಗೆ ಬದ್ಧರಾಗಿದ್ದು, ಮಂಗಳವಾರ ಬೆಳಗ್ಗೆ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಉಪಾಹಾರ ಸಭೆ ನಡೆಯಲಿದೆ. ಇದರ ನಂತರ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆಗಳು ರಾಜಕೀಯ ವಲಯದಲ್ಲಿ ಜೋರಾಗಿ ಚರ್ಚೆಯಾಗುತ್ತಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author