ಮಂಡ್ಯ : 2018-19 ರಲ್ಲಿ ಅಧಿಕಾರವನ್ನು ಸ್ವಾರ್ಥಕ್ಕಾಗಿ, ತಮ್ಮವರ ಸ್ವಾರ್ಥಕ್ಕಾಗಿ ಅಲ್ಲದೇ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲರ ಜೊತೆ ರಾಜಿಯಾಗಿ, ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ಸಮಯವನ್ನು ವ್ಯರ್ಥ ಮಾಡಿ, ಸ್ವಾರ್ಥಕ್ಕೆ ಲಾಭ ಮಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ಅದು ಅಧಿಕಾರ ಪಡೆಯುವ ಮತ್ತು ಉಳಿಯುವ ರಾಜಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಸರ್ಕಾರಿ ಸವತ್ತುಗಳ ವಿತರಣಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾರಾಯಣಗೌಡರು ಯಾಕೆ ರಾಜಿನಾಮೆ ಕೊಟ್ಟರು ಎಂದು ಕೆ.ಆರ್.ಪೇಟೆಯಲ್ಲಿ ದೊಡ್ಡ ಪ್ರಶ್ನೆ ಎದ್ದಿತ್ತು. ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ನಾರಾಯಣಗೌಡರು ಯಾಕೆ ರಾಜಿನಾಮೆ ಕೊಟ್ಟರು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. 17 ಸಾವಿರ ಕೋಟಿ ರೂ.ಗಳ ಅಭಿವೃದ್ಧಿಯನ್ನು ಮಾಡಿ ಕೆ.ಆರ್.ಪೇಟೆಯ ಸಮಗ್ರ ಅಭಿವೃದ್ಧಿಗಾಗಿ ರಾಜಿನಾಮೆ ಕೊಟ್ಟು, ನುಡಿದಂತೆ ನಾನು ನಡೆದಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
2019 ರ ಮಧ್ಯ ಭಾಗದಿಂದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದಾಗ ಮಹಾಮಾರಿಯನ್ನು ವಿಶ್ರಾಂತಿಯಿಲ್ಲದೆ ನಿರಂತರವಾಗಿ ಕೋವಿಡ್ ವಿರುದ್ಧ ಹೋರಾಡಿದರು. ರಾಜ್ಯ ಬೊಕ್ಕಸದ ಹಣವನ್ನು ಆರೋಗ್ಯ ಇಲಾಖೆಯ ಕಾಯಕಲ್ಪಕ್ಕೆ ಕೊಟ್ಟು ಕೋವಿಡ್ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಹಿಂದಿನ ಸರ್ಕಾರಗಳಲ್ಲಿ ಆರೋಗ್ಯ ವ್ಯವಸ್ಥೆ ಸರಿಯಿರಲಿಲ್ಲ. ಆದರೂ ದಿಟ್ಟತನದಿಂದ ಎದುರಿಸಿದರು. ಅಂದು ಅವರು ಮಾಡಿದ ಕೆಲಸದಿಂದ ಇಂದು ಕೋವಿಡ್ ನಿರ್ವಹಣೆ ಮಾಡಲು ಸಾಧ್ಯವಾಯಿತು. ಒಂದು ಕಡೆ ಯಡಿಯೂರಪ್ಪ ಅವರ ಕೋವಿಡ್ ವಿರುದ್ಧದ ಕಾರ್ಯಕ್ರಮಗಳು, ಮತ್ತೊಂದೆಡೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋಡಿಯವರ ಲಸಿಕಾ ಕಾರ್ಯಕ್ರಮ ಕೋವಿಡ್ ನಿರ್ವಹಣೆ ಮಾಡಲು ಸಹಾಯವಾಯಿತು. ಹೀಗಾಗಿ ನೆಮ್ಮದಿಯಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ. ಕರ್ನಾಟಕದ ಮಹಾಜನತೆ ಈ ಇಬ್ಬರೂ ಮಹನೀಯರನ್ನು ಸದಾ ಕಾಲ ನೆನಪಿನಲ್ಲಿಡಬೇಕು. ಲಕ್ಷಗಟ್ಟಲೇ ಜನರ ಜೀವ ಉಳಿಸಿದ್ದಾರೆ. ಕೆಲಸವಿಲ್ಲದವರಿಗೆ ಬದುಕು ನೀಡಿದ್ದಾರೆ. ಆಟೋ ಚಾಲಕರು, ಕೂಲಿ ಕಾರ್ಮಿಕರಿಗೂ ಸಹ ಯಡಿಯೂರಪ್ಪ ನವರು ಬದುಕು ನೀಡಿದ್ದಾರೆ. ಇದು ಜನಪರವಾದ ಆಡಳಿತ, ಜನರ ರಾಜಕಾರಣ. ನಾರಾಯಣಗೌಡರು ರಾಜಿನಾಮೆ ಕೊಟ್ಟಿದ್ದೂ ಕೂಡ ಜನರ ರಾಜಕಾರಣದ ಸಲುವಾಗಿ. ನಾರಾಯಣಗೌಡರಿಗೆ ಸದಾ ಕಾಲ ನಿಮ್ಮ ಆಶಿರ್ವಾದ ಇರಬೇಕು ಎಂದರು.
ನಮ್ಮ ಸರ್ಕಾರ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸಾಗಿದೆ. ಸಮಾಜದ ಕಟ್ಟಕಡೆಯ, ಅತ್ಯಂತ ದುರ್ಬಲ ವ್ಯಕ್ತಿ, ದೀನ ದಲಿತ, ಹಿಂದಳಿದ ವರ್ಗದ ಜನ, ಅವಕಾಶ ವಂಚಿತರಿಗೆ ಅವಕಾಶ, ದುಡಿಯವ ವರ್ಗಕ್ಕೆ ಕೆಲಸ, ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಾಲಮನ್ನಾ, ಬಡ್ಡಿ ರಹಿತ ಸಾಲ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಭೂಚೇತನ, ಕೆರೆಗಳ ಅಭಿವೃದ್ಧಿ ಮಾಡಿದರು. ರೈತರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಿದರು. ಇದು ರೈತರ ಬಗ್ಗೆ ಅವರಿಗಿದ್ದ ಕಳಕಳಿ. ಅದೇ ದಾರಿಯಲ್ಲಿ ನಾವು ಇಂದು ಮುಂದುವರೆಯುತ್ತಿದ್ದೇವೆ ಎಂದರು.




