ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿಯು ಮತ್ತೆ ಅಸ್ತವ್ಯಸ್ತಗೊಂಡಿದೆ. ಸೆಮಿಸ್ಟರ್ ಅವಧಿಯು ಒಂದು ತಿಂಗಳು ವಿಸ್ತರಿಸಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೇ ಕಂಟಕವಾಗಿದೆ. ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯ ವಿಳಂಬವೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ.
ಪದವಿ ಶಿಕ್ಷಣ ವ್ಯವಸ್ಥೆಗೆ ಮತ್ತೊಮ್ಮೆ ಕೊರೊನಾ ಕಾಲದ ಹೊಡೆತದ ಭೀತಿ ಎದುರಾದಂತಾಗಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಬೇರೆ ಬೇರೆ ದಿನಾಂಕಗಳಲ್ಲಿ ಆರಂಭಗೊಂಡಿವೆ. ಸಾಮಾನ್ಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಅನುಸರಿಸುವಲ್ಲಿ ವಿಫಲವಾಗಿವೆ.
ಮೈಸೂರು ವಿಶ್ವವಿದ್ಯಾಲಯ ಜೂನ್ 30, ಬೆಂಗಳೂರು ವಿಶ್ವವಿದ್ಯಾಲಯ ಜುಲೈ 11, ಮಂಗಳೂರು ವಿಶ್ವವಿದ್ಯಾಲಯ ಜುಲೈ 28, ಕರ್ನಾಟಕ ವಿಶ್ವವಿದ್ಯಾಲಯ ಆಗಸ್ಟ್ 11, ತುಮಕೂರು ವಿಶ್ವವಿದ್ಯಾಲಯ ಆಗಸ್ಟ್ 18 ರಂದು ಆರಂಭಿಸಿವೆ. ಈ ಕಾರಣದಿಂದಲೇ ಮೊದಲ ಸೆಮಿಸ್ಟರ್ ಮುಗಿಯುವ ದಿನಾಂಕವೂ ಪ್ರತಿ ವಿವಿಯಲ್ಲಿ ವಿಭಿನ್ನವಾಗಿದ್ದು, ಶೈಕ್ಷಣಿಕ ವರ್ಷ ಇನ್ನೂ ಸಮರ್ಪಕವಾಗಿ ಸ್ಥಿರವಾಗಿಲ್ಲ.
ಅತಿಥಿ ಉಪನ್ಯಾಸಕರ ನೇಮಕ ವಿಳಂಬದಿಂದಾಗಿ ಆದ ವಿಸ್ತರಣೆಯಿಂದ ಕಾಲೇಜು ಶಿಕ್ಷಣದ ಎಲ್ಲ ಪ್ರಕ್ರಿಯೆ 1 ತಿಂಗಳು ಮುಂದೆ ಹೋಗಲಿವೆ. ಈ ಮಧ್ಯೆ ಈಗಾಗಲೇ ವಿ.ವಿ. ವ್ಯಾಪ್ತಿಯ ಶೈಕ್ಷಣಿಕ ತರಗತಿಗಿಂತ ಸುಮಾರು 1 ತಿಂಗಳು ಮುನ್ನ ಇರುವ ಸ್ವಾಯತ್ತ ವಿ.ವಿ. ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು 2 ತಿಂಗಳು ಮೊದಲೇ ಪದವಿ ಮುಗಿಸಿ ಮುಂದಿನ ಅವಕಾಶಕ್ಕೆ ಸಜ್ಜಾಗುತ್ತಾರೆ. ಆದರೆ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಶಿಕ್ಷಣ, ಉದ್ಯೋಗಕ್ಕೆ ತೆರಳುವಲ್ಲಿ ಎರಡು ತಿಂಗಳು ತಡವಾಗಲಿದೆ.
ಸರ್ಕಾರ ಒಂದು ತಿಂಗಳು ಹೆಚ್ಚುವರಿ ಅವಧಿ ನೀಡಿದ್ದರೂ ಅದರ ಒಳಗೆ ಪಠ್ಯ ಪೂರೈಸುವ ಅವಕಾಶವಿದೆ. ಶನಿವಾರ–ಭಾನುವಾರ ಹಾಗೂ ಕಾಲೇಜು ದಿನಗಳಲ್ಲಿ ವಿಶೇಷ ತರಗತಿಗಳ ಮೂಲಕ ಪಾಠವನ್ನು ನಿಗದಿತ ಅವಧಿಯೊಳಗೆ ಪೂರೈಸಬಹುದು. ಮುಂದಿನ ಸೆಮಿಸ್ಟರ್ ಕೊನೆಗೆ ರಜಾ ಸಮಯ ಹೆಚ್ಚು ಇರುತ್ತದೆ. ಅದನ್ನು ಸಮರ್ಪಕವಾಗಿ ಬಳಸಬಹುದು ಅಂತ ಬೆಂಗಳೂರು ವಿವಿಯ ಕುಲಪತಿ ಡಾ. ಜಯಕರ್ ಎಸ್ ಎಂ ಅವರು ಪ್ರತಿಕ್ರಿಯಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ