ಬೆಂಗಳೂರು(ಫೆ.20): ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ ಎಸ್.ಕೆ. ಭಗವಾನ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
‘ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದ್ದ ಭಗವಾನ್ ಅವರ ನಿಧನದ ಸುದ್ದಿ ಕೇಳಿ ಬಹಳ ಬೇಸರ ತಂದಿದೆ. ನಿರ್ದೇಶನದ ಜತೆಗೆ ನಿರ್ಮಾಪಕರಾಗಿಯೂ ಹಲವು ಉತ್ತಮ ಚಿತ್ರಗಳನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಡಾ. ರಾಜಕುಮಾರ್ ನಟಿಸಿರುವ ಕಸ್ತೂರಿ ನಿವಾಸ, ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಆಪರೇಷನ್ ಡೈಮಂಡ್ ರಾಕೆಟ್, ಅನಂತ ನಾಗ್ ನಟನೆಯ ಬಯಲು ದಾರಿ, ಚಂದನದ ಗೊಂಬೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ಹಿರಿಯ ನಿರ್ದೇಶಕ ದೊರೈರಾಜ್ ಅವರ ಜತೆಗೂಡಿ 50 ಕ್ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿ ಚಿತ್ರರಂಗದಲ್ಲಿ ದೊರೈ-ಭಗವಾನ್ ಎಂದೇ ಖ್ಯಾತನಾಮರಾಗಿದ್ದರು. ವರನಟ ಡಾ.ರಾಜಕುಮಾರ್ ಅವರ ಅನೇಕ ಸಿನಿಮಾಗಳನ್ನು ಮಾಡಿದ್ದ ಭಗವಾನ್ ಅವರು ಅವರ ಸಿನಿ ಪಯಣದ ಪ್ರಮುಖ ಭಾಗವಾಗಿದ್ದರು.
ರಾಜಕುಮಾರ್, ವಿಷ್ಣವರ್ಧನ್, ಅನಂತನಾಗ್, ಶಂಕರ್ ನಾಗ್, ಅಂಬರೀಷ್, ಆರತಿ, ಜಯಂತಿ, ಕಲ್ಪನಾ, ಮಂಜುಳಾ, ಮಾಲಾಶ್ರೀ ಸೇರಿದಂತೆ ಅನೇಕ ತಾರೆಯರನ್ನು ಒಳಗೊಂಡು ಯಶಸ್ವಿ ಚಿತ್ರಗಳನ್ನು ಮಾಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.