ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಚುರುಕಾಗಿದೆ. ಈ ತನಿಖೆ ಮಧ್ಯೆ ಶಾಸಕ ಜನಾರ್ದನ ರೆಡ್ಡಿ ಅವರು ಸ್ಫೋಟಕ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಸಂಸದ ಮತ್ತು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಶಶಿಕಾಂತ್ ಸೆಂಥಿಲ್ ಅವರು ಕಾನೂನು ಸಮರ ಸಾರಿದ್ದಾರೆ.
ಇಂದು ಶಶಿಕಾಂತ್ ಸೆಂಥಿಲ್ ಅವರು ಸಿಟಿ ಸಿವಿಲ್ ಕೋರ್ಟ್‌ಗೆ ವಕೀಲರೊಂದಿಗೆ ಹಾಜರಾಗಿದ್ದರು. ಜರ್ನಾದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸೆಪ್ಟೆಂಬರ್ 11ರಂದು 42ನೇ ACMM ನ್ಯಾಯಾಲಯದಲ್ಲಿ ನಡೆಯಲಿದೆ.
ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪ ಮಾಡಿದ್ರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೆಂಥಿಲ್, ಬುರುಡೆ ಪ್ರಕರಣದಲ್ಲಿ ನನ್ನ ಹೆಸರು ತೆಗೆದುಕೊಳ್ಳಲು ಏನು ಕಾರಣ ಎಂಬುದು ಗೊತ್ತಿಲ್ಲ. ಇದು ಕೇವಲ ರಾಜಕೀಯ ಷಡ್ಯಂತ್ರ. ನನಗೆ ಯಾವುದೇ ಸಂಪರ್ಕ ಇಲ್ಲ. ನಾನು 10 ವರ್ಷ ಕರ್ನಾಟಕದಲ್ಲಿ ಕೆಲಸ ಮಾಡಿದ್ದೇನೆ. ಯಾರಾದರೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಅವರು ಕರ್ನಾಟಕ ಪ್ರಾಪರ್ಟಿಗಳನ್ನು ಲೂಟಿ ಮಾಡಿದ ವ್ಯಕ್ತಿಯಿಂದ ಈ ರೀತಿ ಆರೋಪಗಳು ಬಂದಿವೆ ಎಂದೂ ತೀವ್ರವಾಗಿ ಟೀಕಿಸಿದರು. ಸೆಂಥಿಲ್ ಅವರು ಬುರುಡೆ ಎಲ್ಲಿ ಸಿಕ್ಕಿತು? ಯಾರು ತಂದರು ಅನ್ನೋದು ನನಗೆ ಗೊತ್ತಿಲ್ಲ. ದೆಹಲಿಯಲ್ಲಿ ನಾನು ಯಾರನ್ನೂ ಭೇಟಿ ಮಾಡಿಲ್ಲ. ನನ್ನ ವಿರುದ್ಧ ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ತನಿಖೆಯ ಪೈಪೋಟಿಯಲ್ಲಿ ರಾಜಕೀಯ ದಾಳಿಗೆ ಸಿಲುಕಿದ್ದೇವೆ ಎಂಬ ಆಕ್ರೋಶವನ್ನು ವ್ಯಕ್ತಪಡಿಸಿದರು.
ವರದಿ : ಲಾವಣ್ಯ ಅನಿಗೋಳ