ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಚಳಿ ಆವರಿಸಿದ್ದು, ಕೆಲವು ಕಡೆಗಳಲ್ಲಿ ಮಳೆಯು ಸಹ ಮುಂದುವರಿದಿದೆ. ಈ ನಡುವೆ ಮುಂದಿನ ಆರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನವೆಂಬರ್ 17ರಂದು ಬೆಳಗ್ಗೆ ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ದಾಖಲಾಗಿದ್ದು, ನಂತರ ಬಿಸಿಲು ಕಾಣಿಸಿಕೊಂಡಿದೆ. ಕೆಲವೆಡೆ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಇಂದು ಹಾಗೂ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಹಾಸನ, ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂಲಕ ಮತ್ತೆ ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಮುಂದುವರೆಯಲಿದೆ ಎಂದು ತಿಳಿಸಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಮುಂಗಾರು ಸಂಪೂರ್ಣ ತಗ್ಗಿದೆ. ಈ ಬಾರಿ ರಾಜ್ಯಕ್ಕೆ ಜೂನ್ ಆರಂಭದಲ್ಲೇ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಿದೆ.
ಈಗಾಗಲೇ ಮುಂಗಾರು ರಾಜ್ಯದಲ್ಲಿ ಸಂಪೂರ್ಣ ತಗ್ಗಿದ್ದರೂ, ಜೂನ್‌ನಲ್ಲೇ ಆರಂಭವಾದ ಮಳೆ ರಾಜ್ಯದ ಕೆರೆ-ಕಟ್ಟೆಗಳು, ನದಿಗಳು ಮತ್ತು ಜಲಾಶಯಗಳನ್ನು ತುಂಬಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಕೆಲವೆಡೆ ಅತಿವೃಷ್ಟಿಯಿಂದ ಬೆಳೆ ಹಾನಿ ವರದಿಯಾಗಿದ್ದರೂ, ಒಟ್ಟಾರೆ ಮಳೆಯ ಪರಿಣಾಮ ರೈತರ ಮುಖದಲ್ಲಿ ಸಂತೋಷ ಮೂಡಿಸಿತ್ತು.
ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ವಾತಾವರಣ ನಿರ್ಮಾಣ ಆಗಿದೆ. ನವೆಂಬರ್ ತಿಂಗಳಾತ್ಯದಲ್ಲಿ ಚಳಿಗಾಲ ಆರಂಭ ಆಗಲಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಚಳಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜನರು ಆರೋಗ್ಯ ಸುರಕ್ಷತೆಯಿಂದ ಅದರಲ್ಲೂ ಈ ವೇಳೆಯೇ ಮಕ್ಕಳಿಗೆ ಕೆಮ್ಮು, ಜ್ವರ, ನೆಗಡಿ ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ.
ವರದಿ : ಲಾವಣ್ಯ ಅನಿಗೋಳ

