Monday, November 17, 2025

Latest Posts

ರಾಜ್ಯದಲ್ಲಿ ತೀವ್ರ ಚಳಿ ಆರಂಭ – ಬೆಚ್ಚಗಿರಲು IMD ಮುನ್ಸೂಚನೆ

- Advertisement -

ರಾಜ್ಯದಲ್ಲಿ ಚಳಿ ಹೆಚ್ಚಾಗುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆ ತಾಪಮಾನ ಕುಸಿತ ಕಂಡುಬಂದಿದೆ. ಜನರು ಥಂಡಿ, ಥಂಡಿ ಎಂದು ಬೆಚ್ಚಗಿರಲು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಚಳಿ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಚಳಿಯ ತೀವ್ರತೆ ಸ್ಪಷ್ಟವಾಗಿದೆ. ಅವಧಿಗೂ ಮುಂಚೆಯೇ ತಂಪು ವಾತಾವರಣ ಹೆಚ್ಚುತ್ತಿರುವುದು ಜನರನ್ನು ಕಂಗೆಡಿಸಿದೆ. ಕಳೆದ ಶುಕ್ರವಾರ ಬೀದರ್‌ನಲ್ಲಿ ತಾಪಮಾನ 10°C ತಲುಪಿದ್ದು, ಅಲ್ಲಿ ಚಳಿ ಹೆಚ್ಚು ತೀವ್ರವಾಗಿತ್ತು. ಮುಂದಿನ ದಿನಗಳಲ್ಲಿ ಉತ್ತರ ಒಳನಾಡು ಭಾಗದಲ್ಲಿ ಚಳಿಯ ತೀವ್ರತೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿಯೂ ಬೆಳಗಿನ ಜಾವ ಚಳಿ ಹೆಚ್ಚಾಗುವ ನಿರೀಕ್ಷೆ ಇದೆ.

ಈ ಬಾರಿ ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಚಳಿ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ. ಮುಂದಿನ ತಿಂಗಳಲ್ಲಿಯೂ ಚಳಿಯ ಪರಿಣಾಮ ಮುಂದುವರಿಯುವ ಸಾಧ್ಯತೆ ಇದೆ. ಇತ್ತ ಮಳೆ ಕಡಿಮೆಯಾಗಿದ್ದು, ಇಂದು ಕೆಲವು ಕಡೆ ತುಂತುರು ಮಳೆಯ ಸೂಚನೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಕೆಲವೆಡೆ ಬಿಸಿಲು ಹೆಚ್ಚಾಗುವ ಸಾಧ್ಯತೆಯೂ ಇದೆ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದ್ದು, ಜನರು ಬೆಚ್ಚಗಿರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಂಪಿನ ಪರಿಣಾಮವಾಗಿ ಜ್ವರ ಮತ್ತು ಶೀತ ಸಂಬಂಧಿತ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿಂದ ಜಾಗ್ರತೆ ವಹಿಸಲು ಸಲಹೆ ನೀಡಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss