ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್, ದೆಹಲಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಈ ಸಂಸ್ಥೆ ನಿರ್ದೇಶಕ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಲೀಲೆಗಳು ಒಂದು, ಎರಡಲ್ಲ. ಚೈತನ್ಯಾನಂದ ಕಿರುಕುಳ ನೀಡಲೆಂದೇ ಒಂದು ಕೊಠಡಿ ಇತ್ತು. ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಕರ್ಮಕಾಂಡ ಒಂದೊಂದಾಗೇ ಬಯಲಾಗಿದೆ.
ಸ್ವಾಮಿ ಚೈತನ್ಯಾನಂದ ವಿರುದ್ಧ ವಿದ್ಯಾರ್ಥಿಗಳು ಸಾಲು, ಸಾಲು ಆರೋಪಗಳನ್ನ ಮಾಡಿದ್ದಾರೆ. ನಮಗೆ ಬೆದರಿಕೆ ಹಾಕುತ್ತಿದ್ದರು. ತಡರಾತ್ರಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಚೈತನ್ಯಾನಂದ ಸರಸ್ವತಿ ವಿರುದ್ಧ 300 ಪುಟಗಳಿಗೂ ಹೆಚ್ಚು ಸಾಕ್ಷ್ಯಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿದ ನಂತರ ಹೊಸ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳನ್ನು ತಡರಾತ್ರಿ ಸ್ವಾಮಿಯ ವಸತಿಗೃಹಕ್ಕೆ ಕರೆಸಲಾಗಿತ್ತು. ಭದ್ರತೆಯ ಹೆಸರಿನಲ್ಲಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಒಬ್ಬ ವಿದ್ಯಾರ್ಥಿನಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಹೆಸರು ಬದಲಾಯಿಸುವಂತೆ ಒತ್ತಾಯಿಸಲಾಗಿತ್ತು ಎಂಬುದು ತಿಳಿದುಬಂದಿದೆ.
ಸ್ವಾಮಿ ಚೈತನ್ಯಾನಂದ ಸರಸ್ವತಿ ಮತ್ತು ಅವರ ಸಹಚರರು ವಿದ್ಯಾರ್ಥಿನಿಯರನ್ನು ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಿದ್ದರು. ವಾಟ್ಸಾಪ್ ಮತ್ತು ಎಸ್‌ಎಂಎಸ್ ಮೂಲಕ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಲಾಗಿತ್ತು. ಅವರು ಈ ಕ್ರಮಗಳನ್ನು ವಿರೋಧಿಸಿದರೆ, ವಿದ್ಯಾರ್ಥಿಗಳ ಪದವಿಗಳನ್ನು ತಡೆಹಿಡಿಯುವ ಮತ್ತು ದಾಖಲೆಗಳನ್ನು ತಡೆಹಿಡಿಯುವ ಬೆದರಿಕೆ ಹಾಕಲಾಗಿತ್ತು.
ಚೈತನ್ಯಾನಂದನ ಈ ವಿಚಾರ ಬೆಳಕಿಗೆ ಬಂದ ತಕ್ಷಣ ಶೃಂಗೇರಿ ಮಠದ ಆಡಳಿತ ತಕ್ಷಣ ಸ್ವಾಮೀಜಿಯನ್ನು ವಜಾ ಮಾಡಿದೆ. ಕೇಸ್ ದಾಖಲಾಗುತ್ತಿದ್ದಂತೆಯೇ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಪರಾರಿ ಆಗಿದ್ದಾರೆ. ಪೊಲೀಸರು ತಲಾಶ್ ನಡೆಸಿದ್ದಾರೆ. ಇನ್ನು ಶಾರದಾ ಇನ್‌ಸ್ಟಿಟ್ಯೂಟ್‌ನ ನೆಲಮಾಳಿಗೆಯಲ್ಲಿ ವೋಲ್ವೋ ಕಾರು ಪತ್ತೆಯಾಗಿದ್ದು ನಕಲಿ ನಂಬರ್ ಪ್ಲೇಟ್ ಹೊಂದಿದೆ. ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ. ಆರೋಪಿ ವಿದೇಶಕ್ಕೆ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.