Hubli News: ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಅಪರಾಧ ಕೃತ್ಯಗಳಿಗೆ ಸಿಂಹಸ್ವಪ್ನವಾಗಿರುವ ಹು-ಧಾ ಪೊಲೀಸ್ ಕಮೀಷನರ್ ಅವರು ಇದೀಗ ಅವಳಿನಗರದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದು, ಯುವಕರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಹಿನ್ನಲೆ ಮೆರವಣಿಗೆ ಸಂದರ್ಭದಲ್ಲಿ ಕಮೀಷನರ್ ಎನ್.ಶಶಿಕುಮಾರ್ ಅವರು ಕೇಂದ್ರ ಬಿಂದುವಾಗಿದ್ದು, ಈ ವೇಳೆ ಯುವಕರು ಸೆಲ್ಫಿಗೆ ಮುಗಿಬಿದ್ದಿದ್ದು, ಹೊಸ ಕ್ರೇಜ್ ಕಂಡುಬಂದಿತು.
ಹು-ಧಾ ಅವಳಿನಗರದಲ್ಲಿ ಗಾಂಜಾ ಘಾಟು ಎಗ್ಗಿಲ್ಲದೇ ಹರಡಿತ್ತು, ಇದರಿಂದಾಗಿ ಯುವಕರು ಅಕ್ರಮ ಚಟುವಟಿಕೆಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ಪೊಲೀಸ್ ಕಮೀಷನರ್ ಅವರು ಮಾದಕ ವ್ಯಸನಿಗಳಿಗೆ ಪರೀಕ್ಷೆ ಮಾಡುವ ಮೂಲಕ ಹೊಸ ಸಂಚಲನವನ್ನು ಸೃಷ್ಟಿ ಮಾಡಿದ್ದರು.
ಇದರ ಜೊತೆಗೆ ರೌಡಿ ಶೀಟರ್ ಗಳಿಗೆ ಸಿಂಹಸ್ವಪ್ನವಾಗಿರಯವ ಕಮೀಷನರ್ ಮೊನ್ನೆಯಷ್ಟೆ 15 ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 1700 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಪರೇಡ್ ನಡೆಸುವ ಮೂಲಕ ಏನಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಮುಲಾಜಿಲ್ಲದೆ ಬೇರ ಸಮೇತ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದರು. ಕಮೀಷನರ್ ಅವರು ಅವಳಿನಗರಕ್ಕೆ ಲಗ್ಗೆ ಇಟ್ಟಗಿನಿಂದಾಗಿ ದಿನಕ್ಕೊಂದು ಹೊಸ ಹೊಸ ಪ್ರಕರಣಗಳನ್ನು ಬೇಧಿಸುತ್ತಿದ್ದು, ಯೂತ್ ಐಕಾನ್ ಆಗಿ ಹೊರಹೊಮ್ಮಿದ್ದು, ಯುವಕರ ಪಾಲಿನ ಹೀರೋ ಆಗಿದ್ದಾರೆ.
ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಕಾರ್ಯ ವೈಖರಿ ಎಲ್ಲೆಡೆ ಗಮನ ಸೆಳೆದಿದ್ದು, ಅಪರಾಧ ಕೃತ್ಯಗಳಿಂದ ಅವಳಿನಗರ ಮುಕ್ತವಾಗಬೇಕೆಂಬುದು ಅವಳಿನಗರದ ಮಂದಿಯ ಆಸೆಯಾಗಿದ್ದು, ಕಮೀಷನರ್ ಈ ಮೂಲಕ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದಾರೆ.