ಶಿಲ್ಪಾ ಶೆಟ್ಟಿ ಪಬ್‌ನಲ್ಲಿ ಗಲಾಟೆ : ಆರೋಪಗಳ ನಡುವೆ ಸತ್ಯ ನಾಯ್ಡು ಸ್ಪಷ್ಟನೆ

ನಗರದ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಶಿಲ್ಪಾ ಶೆಟ್ಟಿ ಒಡೆತನದ ‘ಬ್ಯಾಸ್ಟಿಯನ್’ ಪಬ್‌ನಲ್ಲಿ, ಮಧ್ಯರಾತ್ರಿ ಗಲಾಟೆ ನಡೆದಿದ್ದು, ಈ ಪ್ರಕರಣದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ನಿರೂಪಕಿಯ ಮಾಜಿ ಪತಿ, ಉದ್ಯಮಿ ಸತ್ಯ ನಾಯ್ಡು ಗಲಾಟೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಕಳೆದ ಎರಡು ದಿನಗಳ ಹಿಂದೆ, ಮಧ್ಯರಾತ್ರಿ ಸುಮಾರು 1:30ರ ವೇಳೆಗೆ ನಡೆದಿದ್ದು, ಪಬ್ ಮುಚ್ಚುವ ಸಮಯದಲ್ಲಿ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಪಬ್‌ನಲ್ಲಿ ಸೇವೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯ ನಾಯ್ಡು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಘಟನೆಯ ವೇಳೆ ಪಬ್‌ನ ಬೌನ್ಸರ್‌ಗಳು ಗಲಾಟೆಯನ್ನು ತಡೆಯಲು ಪ್ರಯತ್ನಿಸಿದರೂ, ಸತ್ಯ ನಾಯ್ಡು ಹಲ್ಲೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವ್ಯಕ್ತಿ ಯಾರು ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಘಟನೆಯ ಸಂಪೂರ್ಣ ವಿಡಿಯೋ ಕರ್ನಾಟಕ ಟಿವಿಗೆ ಲಭ್ಯವಾಗಿದೆ. ಲಭ್ಯವಿರುವ ವಿಡಿಯೋ ದೃಶ್ಯಗಳ ಆಧಾರದಲ್ಲಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ನಿರೂಪಕಿಯ ಮಾಜಿ ಪತಿ ಸತ್ಯ ನಾಯ್ಡು ವಿಡಿಯೋ ಮೂಲಕ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಮಾತನಾಡಿರುವ ಸತ್ಯ ನಾಯ್ಡು,ಒಂದು ವಿಡಿಯೋ ವೈರಲ್ ಆಗುತ್ತಿದೆ, ನಾನು ಹಲ್ಲೆ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಯಾವುದೇ ರೀತಿಯ ಹಲ್ಲೆಯನ್ನೂ ಮಾಡಿಲ್ಲ, ಜಗಳವೂ ಮಾಡಿಲ್ಲ ಎಂದು ಹೇಳಿದ್ದಾರೆ.

ನಾವು ಸ್ನೇಹಿತರೆಲ್ಲರೂ ಊಟ ಮಾಡಲು ಬ್ಯಾಸ್ಟಿಯನ್ ಪಬ್‌ಗೆ ಹೋಗಿದ್ದೆವು. ನಮ್ಮಲ್ಲಿ ಒಬ್ಬ ಸ್ನೇಹಿತ ಬಿಲ್ ಕಟ್ಟುತ್ತಿದ್ದ ಸಮಯದಲ್ಲಿ ಸ್ವಲ್ಪ ನೂಕು-ನುಗ್ಗಲು ಉಂಟಾಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author