ಬೆಂಗಳೂರು : ಸಿಗಂದೂರು ಸೇತುವೆಗೆ ರಾಣಿ ಚೆನ್ನಬೈರಾದೇವಿ, ಕೆಳದಿ ರಾಣಿ ಚೆನ್ನಮ್ಮಾಜಿ, ಶರಾವತಿ ಸೇತುವೆ, ಅಂಬಾರಗೋಡ್ಲು-ಕಳಸವಳ್ಳಿ ಸೇರಿದಂತೆ ಇನ್ನಿತರ ಹೆಸರನ್ನು ಇಡುವ ಚರ್ಚೆಗಳು ನಡೆಯುತ್ತಿವೆ. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನಿಡುವಂತೆ ನ್ಯಾಯಾಲಯದ ಮೆಟ್ಟಿಲೂ ಏರಿದ್ದಾರೆ. ಹೀಗಿರುವಾಗ ಸೇತುವೆಗೆ ನಾಮಕರಣ ಮಾಡುವಾಗ ಅದ್ದರದ್ದೆ ಕೆಲವು ನಿಯಮಗಳಿರುತ್ತವೆ. ಅವುಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಸಿಗಂದೂರು ಬಳಿ ಜುಲೈ 14ರಂದು ನಡೆಯುವ ಸೇತುವ ಲೋಕಾಪರ್ಣೆ ಕಾರ್ಯಕ್ರಮದ ಸ್ಥಳವನ್ನು ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಉದ್ಘಾಟನೆಗೆ ಈಗಾಗಲೇ ಅಗತ್ಯ ಸಿದ್ಧತೆಗಳು ಮುಂದುವರೆದಿದ್ದು, ಸೇತುವೆಗೆ ಸಿಗಂದೂರು ಚೌಡೇಶ್ವರಿ ಕೇಬಲ್ ಸೇತುವೆ ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಹೆಸರನ್ನು ಅಂತಿಮಗೊಳಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ. ಅದರ ಅನುಮೋದನೆಗೆ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಶರಾವತಿ ನದಿಯ ಹಿನ್ನೀರ ಭಾಗದ ಜನರ, ರೈತರ ಆರು ದಶಕದ ಕನಸು ಈಗ ನನಸಾಗುತ್ತಿದೆ. ಸುಮಾರು 470 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಅತಿ ಉದ್ದದ ಎರಡನೇ ಕೇಬಲ್ ಆಧಾರಿತ ಸೇತುವೆ ಇದಾಗಿದೆ. ಈ ಸೇತುವೆಗೆ ರಾಷ್ಟ್ರೀಯ ಹೆದ್ದಾರಿ 369ಇ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೆ ಸಾಗರದಿಂದ ಮರಕುಟಿಕವರೆಗೆ ಹೆದ್ದಾರಿ ನಿರ್ಮಿಸಲು 920 ಕೋಟಿ ರೂಪಾಯಿ ಬಿಡುಗಡೆಯಾಗಿದೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯವಾಗಿ ಗ್ರಾಮ ಪಂಚಾಯತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರು ಸಂಸದರಾಗಿದ್ದಾಗ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿ ಸೇತುವೆಗೆ ಮಂಜೂರಾತಿ ದೊರಕಿಸಿ ಕೊಟ್ಟಿದ್ದರು. ಹೀಗಾಗಿ ಕೇಂದ್ರ ಸಚಿವ ಗಡ್ಕರಿ ಅವರು ಸೇತುವೆ ಉದ್ಘಾಟಿಸುವರು. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಸೇತುವೆ ನಿರ್ಮಾಣದ ಹಿಂದೆ ಎಲ್ಲರ ತಪ್ಪಸ್ಸಿದೆ. ಅನೇಕರ ಹೋರಾಟಗಳು, ಮನವಿ ಎಲ್ಲವೂ ಸೇತುವೆಗಾಗಿಯೇ ಸಲ್ಲಿಸಲಾಗಿತ್ತು. ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಸೇರಿ ಎಲ್ಲರೂ ಪ್ರಯತ್ನ ನಡೆಸಿದ್ದಾರೆ. ಈ ಅಪರೂಪದ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಇರುವ ಸಿಗಂದೂರು ದೇವಿಯ ಭಕ್ತರು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಈ ಸೇತುವೆಯ ನಿರ್ಮಾಣದ ರೂವಾರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಸರಕಾರದ ಸಚಿವರು, ಜಿಲ್ಲೆಯ ಎಲ್ಲ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.