ಹಾಸನ ಜಿಲ್ಲೆಯ ಬೇಲೂರು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವಿರುದ್ಧ ಕಿರುಕುಳ ಆರೋಪಿಸಿ ಶಿರಸ್ತೇದಾರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಚೇರಿ ಮುಂಭಾಗದಲ್ಲೇ ಮಾತ್ರೆ ಸೇವಿಸಿದ ಶಿರಸ್ತೇದಾರ್ ತನ್ವೀರ್ ಅಹ್ಮದ್ ಅವರನ್ನು ತಕ್ಷಣ ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ವಿರುದ್ಧ ಕೆಲಸದ ಒತ್ತಡ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ತನ್ವೀರ್ ಅಹ್ಮದ್ ಮಾಡಿದ್ದಾರೆ. ಈ ಹಿನ್ನೆಲೆ ತಾಲೂಕು ಕಚೇರಿ ಮುಂಭಾಗದಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ತನ್ವೀರ್ ಅಹ್ಮದ್, ತಹಶೀಲ್ದಾರ್ ಉದ್ದೇಶಪೂರ್ವಕವಾಗಿ ಹೆಚ್ಚುವರಿ ಕೆಲಸದ ಒತ್ತಡ ಹೇರಿದ್ದು, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ತಳ್ಳಿಹಾಕಿದ್ದು, ತನ್ವೀರ್ ಅಹ್ಮದ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯ ವಿರುದ್ಧವೇ ದೂರು ದಾಖಲಿಸಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.
ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ವರದಿ : ಲಾವಣ್ಯ ಅನಿಗೋಳ




