shivamogga news:
ಸಾವರ್ಕರ್ ವ/ಸ್ ಟಿಪ್ಪು ಫ್ಲೆಕ್ಸ್ ಕಿಚ್ಚು ಹೆಚ್ಚಾಗುತ್ತಲೇ ಇದೆ. ಕೋಮುಗಲಬೆಯಿಂದ ಮಲೆನಾಡು ಬೂದಿ ಮುಚ್ಚಿದ ಕೆಂಡದಂತಿದೆ. ಸೆಕ್ಷನ್ ನಡುವೆಯೂ ಶಿವಮೊಗ್ಗ ಧಗಧಗಿಸುತ್ತಿದೆ. ಕೆಲವೇ ಕೆಲವರ ವಿಕೃತ ಕಾರ್ಯಕ್ಕೆ ಇದೀಗ ಇಡೀ ಜಿಲ್ಲೆಯೇ ಹೊತ್ತಿ ಉರಿಯುತ್ತಿದೆ. ಅಷ್ಟಕ್ಕೂ ಆ ಕಿಚ್ಚು ಹುಟ್ಟಿಕೊಂಡಿದ್ದಾದ್ರೂ ಹೇಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.75 ರ ಅಮೃತ ಮಹೋತ್ಸವಕ್ಕೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ತಿರಂಗ ಬಾನೆತ್ತರಕ್ಕೆ ಹಾರಾಡಿತು.ಆದರೆ ಸೂರ್ಯ ನೆತ್ತಿಮೇಲೆ ಬಂದು ಇಳಿಯುತ್ತಿರೋ ಸಮಯಕ್ಕೆ ಮಲೆನಾಡಿನ ಹೆಬ್ಬಾಗಿಲು ಮಾತ್ರ ಹೊತ್ತಿ ಉರಿಯಲು ಶುರುವಾಗಿತ್ತು….
ಹೌದು ದೇಶದ ಪ್ರಧಾನಿ ಸಾಮರಸ್ಯದ ಸಂದೇಶ ಸಾರಿ ಇನ್ನೂ ಮಾತಿನ ಬಿಸಿ ಆರಿರಲಿಲ್ಲ. ಅಷ್ಟರಲ್ಲಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಸಾವರ್ಕರ್, ಟಿಪ್ಪುಕಟ್ಔಟ್ ಕಾರಣಕ್ಕೆ ರಕ್ತ ಚೆಲ್ಲಿತ್ತು.ಎಸ್ ಡಿ ಪಿ ಐ ನ ಕೆಲ ಕಿಡಿಗೇಡಿಗಳು ಸಾವರ್ಕರ್ ಫೋಟೋವನ್ನು ತೆರವು ಮಾಡಿ ಗಲಬೆಗೆ ನಾಂದಿ ಹಾಡಿದರು.
75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಂದು ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ವಿ ಡಿ ಸಾವರ್ಕರ್ ಅವರ ಪೋಟೋ ಕಟ್ಟಲಾಗಿತ್ತು. ಈ ಫ್ಲೆಕ್ಸ್ ಅನ್ನು ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ತೆಗೆದು ಹಾಕಲು ಮುಂದಾಯಿತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಕಿಡಿಗೇಡಿಗಳನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಲಾಗಿದ್ದಂತ ವಿ ಡಿ ಸಾವರ್ಕರ್ ಅವರ ಪೋಟೋ ತೆರವುಗೊಳಿಸಿದ್ದರಿಂದಾಗಿ, ಮತ್ತೆ ಜಿಲ್ಲೆಯಲ್ಲಿ ಸಾವರ್ಕರ್ ವಿವಾದ ಭುಗಿಲೆದ್ದಿದೆ. ಈ ಹಿನ್ನಲೆಯಲ್ಲಿಯೇ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಯಿತು.
ಇದರ ನಡುವೆ ಕೆಲ ಕಿಡಿಗೇಡಿಗಳು ಹಿಂದೂ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಪ್ರೇಮ್ ಸಿಂಗ್ ಎಂಬಾತ ಅಂಗಡಿಯಿಂದ ಹೊರ ಬರುತ್ತಿದ್ದಂತೆ ಆತನಿಗೆ ಚಾಕುವಿನಿಂದ ಇರಿದು ಖದೀಮರು ಓಡಿ ಹೋಗಿದ್ದಾರೆ.ಅವರಿಗಾಗಿ ಬಲೆ ಬೀಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಮತ್ತಷ್ಟು ಕಿಡಿಗೇಡಿಗಳಿಗೆ ಶೋಧ ಕಾರ್ಯ ನಡೆಸುತ್ತಿದೆ.
ಇಷ್ಟೆಲ್ಲಾ ಗಲಬೆಗೆ ಕಾರಣವೇ ಆ ಮಾಲ್ ನಲ್ಲಿ ಆ ಒಬ್ಬ ವ್ಯಕ್ತಿಯಿಂದ .ಹೌದುಶಿವಮೊಗ್ಗದ ಶಿವಪ್ಪ ನಾಯ್ಕ್ ಮಾಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಸರೋಜಿನಿ ನಾಯ್ಡು, ಚಂದ್ರಶೇಖರ್ ಆಜಾದ್ ಮುಂತಾದವರ ನಡುವೆ ಹಾಕಲಾಗಿದ್ದ ಸಾವರ್ಕರ್ ಅವರ ಪೋಸ್ಟರ್‌ಗೆ ಹಲವಾರು ಆಕ್ಷೇಪ ವ್ಯಕ್ತವಾಗಿತ್ತು.. ವ್ಯಕ್ತಿಯೊಬ್ಬ ಬ್ರಿಟಿಷರ ಬೂಟ್ ನೆಕ್ಕಿದವನ ಫೋಟೋ ಇಲ್ಲಿ ಹಾಕಿದ್ದೀರ ಎಂಬುವುದಾಗಿ ಕೂಗ ತೊಡಗಿದ್ದ.ಇದನ್ನು ಕೆಳಗಿಳಿಸಲು ಮಾಲ್ ಆಡಳಿತ ನಿರಾಕರಿಸಿದ ಹಿನ್ನೆಲೆಯಲ್ಲಿ ಜನರು ಕಟ್ಟಡದ ಹೊರಗೆ ಧರಣಿ ನಡೆಸಿದರು.
ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ, ಮಾಲ್ ಆಡಳಿತವು ಅಂತಿಮವಾಗಿ ಪೋಸ್ಟರ್ ಅನ್ನು ಕೆಳಗೆ ಎಳೆಯಲು ನಿರ್ಧರಿಸಿತು. ಆದರೆ, ಬಿಜೆಪಿ ಕಾರ್ಯಕರ್ತರ ಗುಂಪು ಈ ನಿರ್ಧಾರದಿಂದ ಸಂತಸಗೊಂಡಿಲ್ಲ ಮತ್ತು ಚಿತ್ರವನ್ನು ಹಿಂದಕ್ಕೆ ಹಾಕಬೇಕೆಂದು ಒತ್ತಾಯಿಸಿತ್ತು. ಅಲ್ಲಿಂದ ಶುರುವಾಯಿತು ನೋಡಿ ಫ್ಲೆಕ್ಸ್ ವಿವಾದ.ಈ ಮಾಲ್ ನಿಂದ ಹುಟ್ಟಿಕೊಂಡ ವಿವಾದ ಇಂದು ಶಿವಮೊಗ್ಗದ ಎಲ್ಲೆಡೆ ರಕ್ತದೋಕುಳಿಗೆ ಕಾರಣವಾಯಿತು.
ಒಟ್ಟಾರೆ ಶಿವಮೊಗ್ಗದ ಈ ಕೋಮು ಗಲಬೆ ಯಾವಾಗ ನಿಲ್ಲತ್ತೋ ಕಾದು ನೋಡಬೇಕಾಗಿದೆ. ಈ ಗಲಬೆಗೆ ಯಾವುದೇ ರಾಜಕೀಯ ಬಣ್ಣ ಹಚ್ಚದೆ ಮತ್ತೆ ಸಾಮರಸ್ಯದಿಂದ ಶಿವಮೊಗ್ಗ ಶಾಂತವಾಗಲಿ ಎನ್ನುವುದೇ ನಮ್ಮ ಕಳಕಳಿ.