ಶಿವಮೊಗ್ಗ: ಪೋಲಿಸರ ಮೇಲೆ ಚಾಕುವಿನಿಂದ ದಾಳಿಗೆ ಯತ್ನಿಸಿದ ಆರೋಪಿಯ ಕಾಲಿಗೆ ದೊಡ್ಡಪೇಟೆ ಠಾಣೆ ಸಬ್ ಇನ್ಸ್ ಪೆಕ್ಟರ್ ವಸಂತ್ ಗುಂಡು ಹಾರಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ.
ಐದು ದಿನಗಳ ಹಿಂದೆ ನಾಲ್ವರು ಯುವಕರ ತಂಡ ಅಶೋಕ್ ಪ್ರಭು ಎಂಬುವರಿಗೆ ಅಡ್ಡಹಾಕಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಶೋಕ್ ಪಕ್ಕದ ಬಿಲ್ಡಿಂಗ್ ಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಇದರ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಮಾಡಿದ ಪೋಲಿಸರು, ಸಾಗರ ಪಟ್ಟಣದ ಹೊಸನಗರ ರಸ್ತೆ ನಿವಾಸಿ ಆಸಿಫ್(27) ಎಂಬುವರನ್ನು ಬಂಧಿಸಿದ್ದರು. ಆಸಿಫ್ ನೀಡಿದ ಮಾಹಿತಿ ಆಧರಿಸಿ ನಿರ್ಮಾಣ ಹಂತದ ಲೇಔಟ್ ನಲ್ಲಿ ಬಚ್ಚಿಟ್ಟುಕೊಂಡಿದ್ದ ಅಸ್ಲಂನನ್ನು ಬಂಧಿಸಲು ಮುಂದಾದ ಪೋಲಿಸರ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದಾಗ ಸಿಬ್ಬಂದಿಯ ರಕ್ಷಣೆಗೆ ಪಿಎಸ್ಐ ವಸಂತ್ ಅಸ್ಲಂ ಬಲಗಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಗಾಯಾಳು ಅಸ್ಲಂನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಅಸ್ಲಂ ವಿರುದ್ಧ ಎರಡು ಪ್ರಕರಣ 9 ಪ್ರಕರಣ ದಾಖಲಾಗಿದೆ. ಆಸಿಫ್ ವಿರುದ್ಧ ಎರಡು ಪ್ರಕರಣ ದಾಖಲಾಗಿವೆ ಎಂದು ಎಸ್ಪಿ ಹೇಳಿದರು.