ಲಂಚದ ಕೇಸ್ನಲ್ಲಿ ಶಿವಣ್ಣ ಅಂದರ್!

ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರವನ್ನು ಕೆಲವರು ತಮ್ಮ ಕರ್ತವ್ಯದ ಭಾಗವೆಂದೇ ಭಾವಿಸಿಕೊಂಡಿದ್ದಾರೆ. ದುಡ್ಡು ಪಡೆದು ಕೆಲಸ ಮಾಡುವ ಪೊಲೀಸರ ಸೇವೆ ಜನರಿಗೆ ಬೇಕಿಲ್ಲ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಲಂಚ ಸ್ವೀಕಾರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರಿರುವ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಜಾಮೀನು ನಿರಾಕರಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ, ಪೊಲೀಸ್ ಇಲಾಖೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಕುರಿತು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಜಾಲ ಪೊಲೀಸ್ ಠಾಣೆಯ PSI ಆಗಿದ್ದ ಶಿವಣ್ಣ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶರು, ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕಜಾಲ ಠಾಣೆಯೊಂದರಲ್ಲಿಯೇ ಐವರು ಪೊಲೀಸರು ಲಂಚದ ಉರುಳಿನಲ್ಲಿ ಸಿಕ್ಕಿಬಿದ್ದಿರುವುದು ಭ್ರಷ್ಟಾಚಾರದ ಅಗಾಧತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಂಚನೆ ಪ್ರಕರಣದಲ್ಲಿ ‘ಬಿ’ ವರದಿ ಸಲ್ಲಿಸಲು ಎಸ್.ವಿ. ರವಿಕುಮಾರ್ ಅವರಿಂದ ಎರಡು ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟು ಸ್ವೀಕರಿಸಿದ್ದ ಆರೋಪದಲ್ಲಿ ಪಿಎಸ್‌ಐ ಶಿವಣ್ಣ ಅವರನ್ನು ಡಿಸೆಂಬರ್ 23ರಂದು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಬಂಧಿಸಿದ್ದರು. ಬಂಧನದ ನಂತರದಿಂದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಫುಟ್‌ಪಾತ್‌ನಲ್ಲಿ ಹೋಟೆಲ್ ನಡೆಸುತ್ತಿದ್ದ ವ್ಯಕ್ತಿಯಿಂದ 30 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಮಲ್ಲೇಶ್ವರಂ ಉಪವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತ ಎಚ್.ವಿ. ಕೃಷ್ಣಮೂರ್ತಿ ಅವರ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author