ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ ಸೇರಿದಂತೆ 17 ಆರೋಪಿಗಳು ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಸ್ಯಾಂಡಲ್ ವುಡ್ ನಟ ನಟಿಯರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ದೊಡ್ಮನೆ ಹಿರಿಯಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ದರ್ಶನ್ ಬಂಧನದ ಕುರಿತು ಮೌನ ಮುರಿದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಶಿವಣ್ಣ, ಎಲ್ಲಾ ಹಣೆಬರಹ ಏನೂ ಮಾಡೋಕಾಗಲ್ಲ. ನಾವೇನೇ ಮಾತನಾಡೋಕೆ ಹೋದ್ರು , ನಾವೇನು ಮಾಡ್ತೀವಿ ಅದು ಸರೀನಾ ಅಂತ ಯೋಚನೆ ಮಾಡ್ಬೇಕು. ಅದು ಬಿಟ್ಟರೆ ಇನ್ನೇನು ಹೇಳೊಕೆ ಆಗಲ್ಲ. ನೋವಾಗುತ್ತೆ, ಯಾಕೆ ಹೀಗಾಯ್ತು ಅಂತ ಬೇಸರ ಆಗುತ್ತೆ. ರೇಣುಕಾಸ್ವಾಮಿ ಕುಟುಂಬಕ್ಕಾಗಲೀ, ದರ್ಶನ್ ಕುಟುಂಬಕ್ಕಾಗಲೀ ಇದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೆಲ್ಲ ಜೀವನದ ಭಾಗ.. ಒಳ್ಳೆಯದ್ದು ಕೆಟ್ಟದ್ದು ಎರಡೂ ನಡೆಯುತ್ತದೆ. ನಾವು ಎಲ್ಲವನ್ನು ಎದುರಿಸಬೇಕಾಗುತ್ತೆ. ಪ್ರಕರಣ ನ್ಯಾಯಾಲಯದಲ್ಲಿದೆ. ಎಲ್ಲರಿಗೂ ಒಂದು ನ್ಯಾಯ ಸಿಗಬೇಕು. ಕಾದು ನೋಡೋಣ, ಖಂಡಿತಾ ಎರಡೂ ಕುಟುಂಬಕ್ಕೆ ನ್ಯಾಯ ಸಿಗುತ್ತೆ. ಇದೆಲ್ಲ ಹಣೆಬರಹ ಅಷ್ಟೇ. ಮತ್ತೇನಿಲ್ಲ. ಇದಕ್ಕೂ ಹೆಚ್ಚು ನಾನೇನು ಹೇಳಲು ಬಯಸುವುದಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಒಟ್ನಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಬಗ್ಗೆ ಪ್ರತಿದಿನ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ ದೊಡ್ಮನೆ ಕುಡಿ ನಟ ಶಿವರಾಜ್ ಕುಮಾರ್ ಅವರ ಪ್ರತಿಕ್ರಿಯೆ ಬಗ್ಗೆ ಹಲವರು ಕುತೂಹಲದಿಂದ ಕಾದಿದ್ದರು ಹಾಗೂ ಯಾಕೆ ಇನ್ನೂ ಶಿವಣ್ಣ ಮೌನವಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದವು. ಅದೆಲ್ಲದಕ್ಕೂ ಈಗ ತೆರೆ ಬಿದ್ದಿದೆ.




