ನಿಶೆಯಲ್ಲಿದ್ದ ಕೆಲ ಖಾಸಗಿ ಶಾಲಾ ವಾಹನಗಳ ಚಾಲಕರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿ ಮತ್ತು ಇಳಿಸಿದ್ದಾರೆ. ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ನಗರ ವ್ಯಾಪ್ತಿಯಲ್ಲಿ ಖಾಸಗಿ ಶಾಲಾ ವಾಹನಗಳ ತಪಾಸಣೆ ನಡೆಸಿದ ಪೊಲೀಸರು ಒಟ್ಟು 510 ಶಾಲಾ ವಾಹನಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪಾನಮತ್ತರಾಗಿದ್ದ 26 ಚಾಲಕರ ವಿರುದ್ಧ IMV ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೇ, ಈ ಚಾಲಕರ ಚಾಲನಾ ಪರವಾನಿಗೆ ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ಏಕಮುಖ ಸಂಚಾರ ರಸ್ತೆಗಳಲ್ಲಿ ಕಾನೂನು ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದವರ ಮೇಲೂ ಕಠಿಣ ಕ್ರಮ ಜರುಗಿಸಲಾಗಿದೆ.
ಬುಧವಾರ ಮತ್ತು ಗುರುವಾರ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಸಂಚಾರ ಪೊಲೀಸರು ಒಟ್ಟು 5,458 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಜಂಟಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಲೋಕಭವನಕ್ಕೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಕಿಡಿಗೇಡಿಯೊಬ್ಬ ಕಳುಹಿಸಿದ್ದ ಹುಸಿ ಬೆದರಿಕೆ ಸಂದೇಶ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 14ರಂದು ಲೋಕಭವನದ ಅಧಿಕೃತ ಇ-ಮೇಲ್‌ಗೆ gaina_ramesh@outlook.com ಎಂಬ ಇ-ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಈ ಕುರಿತು ತಕ್ಷಣವೇ ರಾಜ್ಯಪಾಲರ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಲೋಕಭವನದಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದು, ಇದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ




