Wednesday, November 26, 2025

Latest Posts

ಸಂಧಾನಕ್ಕೆ ಮುಹೂರ್ತ ಫಿಕ್ಸ್, CM – DCM ದೆಹಲಿಗೆ ಬುಲಾವ್!?

- Advertisement -

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ದೆಹಲಿಗೆ ವಾಪಸ್ಸಾಗಿದ್ದಾರೆ. ಅವರ ಮುಂದಿನ ಹೆಜ್ಜೆ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಎದ್ದಿದೆ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಸಂಧಾನ ಮಾತುಕತೆಗೆ ಹೈಕಮಾಂಡ್ ದಿನಾಂಕ ನಿಗದಿ ಮಾಡಿದೆ ಎಂಬ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಹಂಚಿಕೆ ಕುರಿತ ಗೊಂದಲ ತಾರಕ್ಕೇರಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್ ಮಧ್ಯಪ್ರವೇಶಿಸಿದೆ. ರಾಹುಲ್ ಗಾಂಧಿಯವರ ಸಮಕ್ಷಮದಲ್ಲೇ ಸಿಎಂ–ಡಿಸಿಎಂ ನಡುವೆ ಸಂಧಾನ ಸಂಭಾಷಣೆ ನಡೆಸುವ ಸಾಧ್ಯತೆ ಇದೆ. ಇಬ್ಬರಿಗೂ ಶೀಘ್ರದಲ್ಲೇ ದೆಹಲಿಗೆ ಬರುವಂತೆ ಬುಲಾವ್ ನೀಡುವ ಸೂಚನೆ ಇದೆ.

ನವೆಂಬರ್ 29ರಂದು ಸಂಧಾನ ಸಭೆ ನಡೆಸುವ ಮುಹೂರ್ತವನ್ನು ಹೈಕಮಾಂಡ್ ನಿಗದಿ ಮಾಡಿರುವ ಮಾಹಿತಿ ದೊರೆತಿದೆ. ಬಹುತೇಕ ವಾರಾಂತ್ಯಕ್ಕೆ ಎರಡೂ ನಾಯಕರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಿಎಂ ಸ್ಥಾನ ಹಂಚಿಕೆ ವಿವಾದಕ್ಕೆ ತೆರೆ ಎಳೆಯುವ ಹಂತಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ.

ಮತ್ತೊಂದೆಡೆ, ಸಿಎಂ–ಡಿಸಿಎಂ ವಿವಾದಕ್ಕೆ ಹೈಕಮಾಂಡ್ ತೆರೆ ಎಳೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಮ್ಮ ಭೇಟಿಯ ವೇಳೆ ಸೂಚಿಸಿದ್ದರು. ಇದೇ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಗೊಂದಲಕ್ಕೆ ಅಂತ್ಯಗೊಳಿಸಲು ಪಕ್ಷದ ಒಳಆಲೋಚನೆ ನಡೆಯುತ್ತಿದೆ. ಇದಲ್ಲದೆ, ಖರ್ಗೆ ಸಿಎಂ ಆಗಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಒಂದು ಕಾಲದಲ್ಲಿ ಖರ್ಗೆ ವಿಷಯದಲ್ಲಿ ನಾನು ತಪ್ಪು ಮಾಡಿದ್ದೆನು ಎಂದೂ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಪಕ್ಷದೊಳಗಿನ ಬಣ ರಾಜಕೀಯ ದಿನಕ್ಕೊಂದು, ಕ್ಷಣಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ನವೆಂಬರ್ 29ರ ಸಂಧಾನ ಸಭೆ ನಿಜವಾಗಿಯೂ ನಡೆಯುವುದೇ? ಹೈಕಮಾಂಡ್ ಏನು ತೀರ್ಮಾನಿಸುತ್ತದೆ? ಗುರುವಾರ ಅಥವಾ ವಾರಾಂತ್ಯದಲ್ಲಿ ಕಾಂಗ್ರೆಸ್ ರಾಜಕೀಯ ಇನ್ನಷ್ಟು ರೋಚಕತೆ ಪಡೆಯುವ ಸೂಚನೆ ಸ್ಪಷ್ಟವಾಗಿ ಕಾಣುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss