ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಅವರ ನಾಯಕತ್ವ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ನಾನೇ ಐದು ವರ್ಷ ಮುಖ್ಯಮಂತ್ರಿ ಅಂತಾ ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು ಎಂದು ಕಟುವಾಗಿ ಟೀಕೆ ಮಾಡಿದರು.
ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಎರಡು ಮುಖಗಳ ನಡುವೆ ಸಿಲುಕಿದ್ದಾರೆ ಎಂದು ಹೇಳಿ, ಒಂದು ಕಡೆಯಿಂದ ರೆಬೆಲಿಯನ್ ಸಿದ್ದರಾಮಯ್ಯ—ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡುವವರಲ್ಲ. ಮತ್ತೊಂದು ಕಡೆ ಕಾಂಪ್ರಮೈಸ್ ಸಿದ್ದರಾಮಯ್ಯ—ಒತ್ತಡಕ್ಕೆ ಮಣಿಯುವ ಸಾಧ್ಯತೆ. ನಿಜವಾದ ಸಿದ್ದರಾಮಯ್ಯ ಯಾರು ಎನ್ನುವುದು ಈ ತಿಂಗಳಲ್ಲಿ ಸ್ಪಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ರಾಜಕೀಯದ ಮೂಲ ಸ್ವಭಾವ ಗಟ್ಟಿತನ ಮತ್ತು ಗಡಸುತನ. ಆದರೆ ಈಗ ಅಧಿಕಾರದ ಆಸೆಗಾಗಿ ಆ ಧಾಟಿ ಬದಲಾಗಿದೆ ಎಂಬ ಅನುಮಾನ ಮೂಡಿದೆ ಎಂದು ಹೇಳಿದರು. ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಮಾಡಿದ್ದ ಕಮಿಷನ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವು ಸುಳ್ಳು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಆದರೆ ಈಗ ಅವರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಮಿಷನ್ ಸಂಸ್ಕೃತಿ ನಡೆಯುತ್ತಿದೆ ಎನ್ನುವುದನ್ನು ಜನತೆ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಒಳ ಜಗಳದ ವಿಚಾರಕ್ಕೆ ಸ್ಪಂದಿಸಿದ ಬೊಮ್ಮಾಯಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ಕಾಂಗ್ರೆಸ್ ಮನೆಯಲ್ಲಿ ಬಿರುಕು ಆರಂಭವಾಗಿತ್ತು, ಈಗ ಅದು ಮತ್ತಷ್ಟು ಅಗಲುತ್ತಿದೆ. ಸಮಯ ಬಂದಾಗ ರಾಜಕೀಯವಾಗಿ ಲಾಭ ಪಡೆಯುವ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದರು. ನಂತರ ಧರ್ಮ, ಸಮಾಜ ಮತ್ತು ರಾಷ್ಟ್ರ ಜೀವನದ ಕುರಿತು ಮಾತನಾಡಿದ ಅವರು, ಇಂದು ಸಮಾಜದಲ್ಲಿ ಗೊಂದಲ ಹೆಚ್ಚಾಗಿದೆ. ಧರ್ಮ ಒಂದಾಗಿಸಬೇಕಾಗಿದ್ದು ಬೇರ್ಪಡಿಸುತ್ತಿದೆ. ಸ್ವಾಮಿ ವಿವೇಕಾನಂದರು ಭೂಮಿಯನ್ನು ಪ್ರೀತಿಸುವುದರಲ್ಲೇ ಧರ್ಮ ಮತ್ತು ದೇಶಭಕ್ತಿ ಆರಂಭವಾಗುತ್ತದೆ ಎಂದು ಹೇಳಿದ್ದಾರೆ ಎಂದರು.
ಭಾರತದ ಸಂಸ್ಕೃತಿ ಮೇಲಿನ ಐತಿಹಾಸಿಕ ದಾಳಿಯನ್ನು ಉಲ್ಲೇಖಿಸಿದ ಬೊಮ್ಮಾಯಿ, ಇಲ್ಲಿ ಸಂಪತ್ತಿಗಾಗಿ ಯುದ್ಧವಲ್ಲ, ಸಂಸ್ಕೃತಿಯನ್ನೇ ಗುರಿಯಾಗಿಸಿಕೊಂಡ ದಾಳಿಯಾಗಿತ್ತು. ಆದರೆ ಸಂತರು, ವಿಶೇಷವಾಗಿ ವಿವೇಕಾನಂದರು ದೇಶವನ್ನು ಉಳಿಸಿದರು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಮಠ ನೀಡುತ್ತಿರುವ ಮೌಲ್ಯಗಳ ಬಗ್ಗೆ ಪ್ರಶಂಸಿಸಿದ ಅವರು, ಇದು ದೇಶ ಕಟ್ಟುವ ಭದ್ರ ಬುನಾದಿ. ಪ್ರಧಾನಿ ನರೇಂದ್ರ ಮೋದಿ 2047ಕ್ಕೆ ವಿಕಸಿತ ಭಾರತದ ಕನಸು ಕಂಡಿದ್ದಾರೆ. ಆ ಕನಸು ನನಸಾಗಲು ಈ ಮಠ ರೂಪಿಸುತ್ತಿರುವ ಪೀಳಿಗೆ ಪ್ರಮುಖ ಎಂದು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




