ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲ ಬಗೆಹರಿದಿಲ್ಲ. ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ಗರಿಗೆದರಿದೆ. ಕಾಂಗ್ರೆಸ್‌ನಲ್ಲಿ ಬಣಗಳ ರಾಜಕೀಯ ತೀವ್ರಗೊಂಡಿರುವ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 20 ಮತ್ತು 21ರಂದು ಮೈಸೂರು ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ನವೆಂಬರ್ 20ರಂದು ಮಧ್ಯಾಹ್ನ 3.20ಕ್ಕೆ ಸಿಎಂ ಮೈಸೂರಿಗೆ ಆಗಮಿಸಲಿದ್ದು, ನಗರದಲ್ಲೇ ವಾಸ್ತವ್ಯ ಇರಲಿದ್ದಾರೆ. ನವೆಂಬರ್ 21ರಂದು ಬೆಳಗ್ಗೆ 10.30ಕ್ಕೆ ಕೆಎಸ್‌ಓಯು ಘಟಿಕೋತ್ಸವ ಭವನದಲ್ಲಿ ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಥಮ ವಾರ್ಷಿಕೋತ್ಸವ ಮತ್ತು ‘ಡಿ. ದೇವರಾಜ ಅರಸು – ಎಲ್.ಜಿ. ಹಾವನೂರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಸಿಎಂ ಹಾಜರಾಗುವರು. ನಂತರ ಸಂಜೆ 6ಕ್ಕೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪಿ. ಮಲ್ಲೇಶ್ ಅವರ ಪುಸ್ತಕಗಳ ಇಂಗ್ಲಿಷ್ ಅನುವಾದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಂತರ ರಾತ್ರಿ ಬೆಂಗಳೂರಿಗೆ ಮರಳುವರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




