Tuesday, October 14, 2025

Latest Posts

ಸಿದ್ದರಾಮಯ್ಯ ಎಚ್ಚರಿಕೆ ಫಲ : ಜಾತಿಗಣತಿ ಟಾರ್ಗೆಟ್‌ ರೀಚ್‌!

- Advertisement -

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ನಿಧಾನಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಚ್ಚರಿಕೆಯ ಬಳಿಕ ಸಮೀಕ್ಷಾ ಕಾರ್ಯ ತೀವ್ರಗತಿಯಲ್ಲಿ ಮುಂದುವರಿದಿದೆ. ಭಾನುವಾರ ಮಾತ್ರವೇ 12 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ದಿನನಿತ್ಯದ ಸಮೀಕ್ಷಾ ಗುರಿ ನಿಗದಿ ಮಾಡಿ, ಪ್ರತಿದಿನ ಕನಿಷ್ಠ 11.85 ಲಕ್ಷ ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದ್ದರು. ಅದಾದ ನಂತರ ಶನಿವಾರ ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆದಿದ್ದು, ಭಾನುವಾರ ಸಂಜೆ 5 ಗಂಟೆಯ ವೇಳೆಗೆ 10 ಲಕ್ಷ ಕುಟುಂಬಗಳ ಗಣತಿ ಮುಗಿದಿದೆ. ಸಂಜೆ 7 ಗಂಟೆಗೆ ಈ ಸಂಖ್ಯೆ 12 ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಈಗಾಗಲೇ 26 ಲಕ್ಷ ಕುಟುಂಬಗಳ 90 ಲಕ್ಷ ಮಂದಿಯ ವಿವರ ದಾಖಲಾಗಿದೆ.

ಸೆಪ್ಟೆಂಬರ್ 22ರಿಂದ ಸಮೀಕ್ಷೆ ಆರಂಭವಾದರೂ, ಮೊದಲ ಐದು ದಿನಗಳು ಸರ್ವರ್, ಆ್ಯಪ್, ನೆಟ್‌ವರ್ಕ್ ಸಮಸ್ಯೆಗಳ ಕಾರಣ ಕೇವಲ 4.36 ಲಕ್ಷ ಕುಟುಂಬಗಳ ಮಾಹಿತಿ ಸಂಗ್ರಹಿಸಲ್ಪಟ್ಟಿತ್ತು. ಅಲ್ಲದೆ 30 ಸಾವಿರಕ್ಕೂ ಹೆಚ್ಚು ಗಣತಿದಾರರು ಆ್ಯಪ್ ಡೌನ್‌ಲೋಡ್ ಮಾಡದೇ ಸಮೀಕ್ಷೆಗೆ ಕೈ ಹಾಕಿರಲಿಲ್ಲ. ಇದರಿಂದ ಮುಖ್ಯಮಂತ್ರಿ ಕಿಡಿಕಾರಿದ್ದರು. ಬಳಿಕ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳಿಗೆ ಸೂಚನೆ ನೀಡಿ, ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಪರಿಣಾಮ ಕಾರ್ಯ ಚುರುಕುಗೊಂಡಿದೆ.

ರಾಜ್ಯದಾದ್ಯಂತ ಬೆಂಗಳೂರು ನಗರವನ್ನು ಹೊರತುಪಡಿಸಿ 1.43 ಕೋಟಿ ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಈ ಕಾರ್ಯಕ್ಕಾಗಿ 1,19,213 ಗಣತಿದಾರರು ಹಾಗೂ 1,21,714 ಬ್ಲಾಕ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲಾವಾರು ಪ್ರಗತಿ ನೋಡಿದರೆ, ಹಾವೇರಿಯಲ್ಲಿ ಶೇ.30ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಉಡುಪಿಯಲ್ಲಿ 7.55% ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 7.63%, ಅಂದರೆ ಅತಿ ಕಡಿಮೆ ಪ್ರಮಾಣದ ಸಮೀಕ್ಷೆ ನಡೆದಿದೆ. ಈ ಜಿಲ್ಲೆಗಳಲ್ಲಿ ವೇಗ ಹೆಚ್ಚಿಸಲು ವಿಶೇಷ ಒತ್ತು ನೀಡುವಂತೆ ಆಯೋಗ ಅಧಿಕಾರಿಗಳು ತಿಳಿಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss