ಮಂಗಳೂರು: ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗಿ ಇದೀಗ 24 ಗಂಟೆಗಳೇ ಕಳೆದುಹೋಗಿದೆ. ಆದರೂ ಕೂಡ ಈ ವರೆಗೂ ಸಿದ್ಧಾರ್ಥ್ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಕಾರು ಚಾಲಕ ಬಸವರಾಜ್ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ನಿನ್ನೆ ಸಂಜೆಯಿಂದಲೂ ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಪೊಲೀಸರು ತಲೆ ಕಡೆಸಿಕೊಂಡು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ವರೆಗೂ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವ ಕುರಿತು ಒಂದೇ ಒಂದು ಸುಳಿವೂ ಸಿಕ್ಕಿಲ್ಲ. ನಾಪತ್ತೆಯಾಗುವ ಕೊನೇ ಕ್ಷಣದವರೆಗೂ ಕಾರು ಚಾಲಕ ಬಸವರಾಜ್ ಪಾಟೀಲ್ ಜೊತೆಯಲ್ಲೇ ಇದ್ದ ಸಿದ್ಧಾರ್ಥ್ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇನ್ನು ನದಿಗೆ ಹಾರಿರುವ ಸಂಶಯದಿಲೂ ಈಜು ತಜ್ಞರು, ನೌಕಾಪಡೆ ಕಾರ್ಯಾಚರಣೆ ನಡೆಸುತ್ತಿದೆ. ಆದರೂ ಅವರ ಕುರಿತಾಗಿ ಒಂದೇ ಒಂದು ಸುಳಿವು ಸಿಗುತ್ತಿಲ್ಲ. ಹೀಗಾಗಿ ಐ ವಿಟ್ನೆಸ್ ಹಾಗೂ ದೂರುದಾರನೂ ಆದ ಕಾರು ಚಾಲಕ ಬಸವರಾಜ್ ಪಾಟೀಲ್ ನನ್ನು ಬೆಳಗ್ಗಿನಿಂದಲೂ ತೀವ್ರ ವಿಚಾರಣೆಗೊಳಪಡಿಸಿರೋ ಕಂಕಣವಾಡಿ ಪೊಲೀಸರು ನಾನಾ ಪ್ರಶ್ನಾವಳಿಯನ್ನು ಕೇಳುತ್ತಿದ್ದಾರೆ. ಇನ್ನು ಮಧ್ಯಾಹ್ನದ ಊಟದ ವಿರಾಮಕ್ಕೆ ಹೊರತುಪಡಿಸಿ ಚಾಲಕನನ್ನು ಬಿಡುವಿಲ್ಲದೆ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಚಾಲಕನ ಹೇಳಿಕೆಗಳನ್ನು ದಾಖಲಿಸಿಕೊಂಡಿರೋ ಪೊಲೀಸರು ಸಿಕ್ಕಿರುವ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.