ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ತೋರಿಸುವುದೇ ಬಿಜೆಪಿಯ ಏಕೈಕ ಕಾರ್ಯಸೂಚಿ ಎಂದು ಆರೋಪಿಸಿದರು. ಮಡಿಕೇರಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್ ಎಂಬುದನ್ನು ನಾವು ಸಮೀಕ್ಷೆಯಲ್ಲಿ ಸೇರಿಸಿದಂತಿಲ್ಲ. ಇದಕ್ಕೂ ಸಿದ್ದರಾಮಯ್ಯ ಅವರಿಗೆ ಸಂಬಂಧವಿಲ್ಲ. ಹಿಂದಿನ ಸಮೀಕ್ಷೆಯಲ್ಲಿ ಸುಮಾರು ಒಂದು ಲಕ್ಷ ಮಂದಿ ಈ ರೀತಿಯಾಗಿ ಹೇಳಿಕೊಂಡಿದ್ದರು. ಆ ವರದಿಯನ್ನು ಆರ್. ಅಶೋಕ್ ಸಚಿವರಾಗಿದ್ದಾಗಲೇ ಒಪ್ಪಿಕೊಂಡಿದ್ದರು ಎಂದು ನೆನಪಿಸಿದರು.
ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ ಎಂಬುದನ್ನು ಉಲ್ಲೇಖಿಸಿದ ಅವರು, ಜಾತಿಗಳಿರುವುದರಿಂದ ಧರ್ಮ ಒಡೆಯುವುದಿಲ್ಲ. ಸರ್ಕಾರ ಹೊಸ ಜಾತಿಗಳನ್ನು ಸೃಷ್ಟಿಸುತ್ತಿಲ್ಲ. ಜಾತಿಗಣತಿಯನ್ನು ನಡೆಸುವುದೂ ಕೇಂದ್ರ ಸರ್ಕಾರವೇ, ರಾಜ್ಯ ಸರ್ಕಾರವಲ್ಲ. ಅದನ್ನು ವಿರೋಧಿಸುವ ಧೈರ್ಯವಿದ್ದರೆ ಬಿಜೆಪಿ ನಾಯಕರು ಪ್ರಧಾನ ಮಂತ್ರಿಗೆ ಪತ್ರ ಬರೆಯಲಿ. ನಮ್ಮ ಸಮೀಕ್ಷೆ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರ ಎಂದರು.
ಸಮೀಕ್ಷೆಗೆ ವಿರೋಧಿಸುತ್ತಿರುವ ವಿಜಯೇಂದ್ರ ಅವರನ್ನು ಟೀಕಿಸಿದ ಗುಂಡೂರಾವ್, ಅವರಿಗೆ ಎಷ್ಟು ತಿಳುವಳಿಕೆ ಇದೆಯೋ ಗೊತ್ತಿಲ್ಲ. ಸರಿಯಾದ ಮಾಹಿತಿ ಪಡೆದುಕೊಂಡು ಮಾತನಾಡಲಿ. ಹಿಂದೆ ಕಾಂತರಾಜ ಆಯೋಗದ ವರದಿಯನ್ನು ಇವರ ಸರ್ಕಾರವೇ ಒಪ್ಪಿಕೊಂಡು, ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಿ ಕ್ರಮ ಕೈಗೊಂಡಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವದಲ್ಲಿ ಪರ-ವಿರೋಧ ಸಹಜವೆಂದು ಅಭಿಪ್ರಾಯಪಟ್ಟ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲಕ ಎಲ್ಲ ವರ್ಗದ ಜನತೆಗೆ ಸರ್ಕಾರದ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯ. ಬಡವರಿಗೂ ಮೀಸಲಾತಿ ನೀಡಬೇಕು ಎಂಬುದು ಸರ್ಕಾರದ ಆಶಯ. ಅದನ್ನು ಸಾಧಿಸಲು ಈ ಸಮೀಕ್ಷೆ ಅತ್ಯಂತ ಅಗತ್ಯ ಎಂದು ಸ್ಪಷ್ಟಪಡಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ