ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರ ಗರಿಗೆದರಿದ್ದು, ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ರಾಜಕೀಯ ಗುದ್ದಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಈ ವಿಷಯ ಈಗ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯ ಕೇಂದ್ರ ಬಿಂದು ಆಗಿದೆ. ಈ ನಡುವೆ, ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್ ನೇರವಾಗಿ ಸಿದ್ದರಾಮಯ್ಯ ವಿರುದ್ಧ ತೀರ ಕಿಡಿಕಾರಿದ್ದು, ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಯುದ್ಧಾವಸ್ಥೆ ತಲುಪಿದಾಗ ವಿರೋಧ ಪಕ್ಷಗಳು ಗಟ್ಟಿಯಾಗಿ ಟೀಕಿಸುತ್ತಿವೆ. ಆದರೆ ಈ ಬಾರಿ, ಬಿಜೆಪಿ ನಾಯಕ ವಿಶ್ವನಾಥ್ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಡಬೇಕು ಎಂದು ಬೇಡಿಕೆ ಇಟ್ಟು, ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಪ್ರಶ್ನೆಯಾಗಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿಶ್ವನಾಥ್, 136 ಸ್ಥಾನಗಳ ಐತಿಹಾಸಿಕ ಗೆಲುವಿನಲ್ಲಿ, ಡಿ.ಕೆ.ಶಿವಕುಮಾರ್ ಅವರ ಶ್ರಮ ಪ್ರಮುಖವಾದದ್ದು. ಕಾಂಗ್ರೆಸ್‌ಗೆ ಒಕ್ಕಲಿಗ ಸಮುದಾಯದ ಮತಗಳು ದೊಡ್ಡ ಪ್ರಮಾಣದಲ್ಲಿ ಸೇರಿವೆ. ಇದಕ್ಕೆ ಕಾರಣ ಡಿಕೆಶಿಯವರ ನಂಬಿಕೆ.
ಈ ಹಿಂದೆ ಕಾಂಗ್ರೆಸ್‌ಗೆ ಒಕ್ಕಲಿಗರಿಂದ 4ರಿಂದ 5 ಸಾವಿರ ಮತಗಳು ಬರುತಿತ್ತು. ಈ ಬಾರಿ 15 ಸಾವಿರ ಮತ ಬಂದಿದೆ. ಡಿಕೆಶಿ ಸಿಎಂ ಆಗುವ ನಿರೀಕ್ಷೆಯಿಂದ ಜನ ಮತ ನೀಡಿದ್ದಾರೆ ಎಂದು ಡಿಕೆಶಿಯನ್ನು ಹಾಡಿಹೊಗಳಿದ್ರು. ಇನ್ನು ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ ಮಾಡಿದ್ದು, ಸಿದ್ದರಾಮಯ್ಯಗೆ ಕಾಂಗ್ರೆಸ್ ಅನಿವಾರ್ಯ. ಆದರೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಅಲ್ಲ. ಅವರು ಬರುವ ಮೊದಲು ಕಾಂಗ್ರೆಸ್ ಸರ್ಕಾರಗಳು ಇರಲಿಲ್ವಾ? ಇವರ ನೀತಿ ಕಾಂಗ್ರೆಸ್‌ಗೆ ಬೀಗ ಹಾಕಿಸುವ ರೀತಿ ಇದೆ ಎಂದು ಗುಡುಗಿದ್ದಾರೆ.
136 ಸ್ಥಾನಗಳನ್ನು ಡಿಕೆಶಿಯೊಬ್ಬರೇ ತಂದಿದ್ದಾರೆ ಎಂದಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲಾ ಜಾತಿ, ಧರ್ಮ, ಭಾಷಾ ಸಮುದಾಯದ ಮತಗಳು ಅಗತ್ಯ. ಸಿಎಂ ಸ್ಥಾನ ಕುರಿತ ಚರ್ಚೆ ಈಗಾಗಲೇ ತೀವ್ರವಾಗಿರುವಾಗ, ಬಿಜೆಪಿ ನಾಯಕರೊಬ್ಬರು ಡಿಕೆಶಿ ಪರವಾಗಿ ಮಾತನಾಡಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

