ಸರಕಾರ ಸುಭದ್ರವಾಗಿರಲು, ಸುಲಲಿತವಾಗಿ ಕಾರ್ಯನಿರ್ವಹಿಸಲು ಕೇವಲ ಸ್ಪಷ್ಟ ಬಹುಮತವಿದ್ದರೆ ಸಾಕಾಗುವುದಿಲ್ಲ ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರವೇ ಇಂದು ಸ್ಪಷ್ಟ ಉದಾಹರಣೆಯಾಗಿದೆ. ಇತ್ತ ಸ್ಪಷ್ಟ ಬಹುಮತ ಮತ್ತು ರಾಜಕೀಯ ವರ್ಚಸ್ಸು ಎರಡನ್ನೂ ಕಳೆದುಕೊಂಡಿರುವ ಪ್ರತಿಪಕ್ಷ ಬಿಜೆಪಿ, ಆಡಳಿತದ ಮೇಲೆ ತೀವ್ರ ಒತ್ತಡ ಹೇರುವ ಸ್ಥಿತಿಯಲ್ಲೂ ಇಲ್ಲ. ಸಾಮಾನ್ಯವಾಗಿ ಈ ಎರಡೂ ಅಂಶಗಳು ಒಂದೇ ಸಮಯದಲ್ಲಿ ಒಂದೇ ಪಕ್ಷದ ಬಳಿ ಇದ್ದರೆ, ಆ ಪಕ್ಷ ಸರಕಾರವನ್ನು ಸರಾಗವಾಗಿ ನಡೆಸುವುದಷ್ಟೇ ಅಲ್ಲದೆ ಮುಂದಿನ ಚುನಾವಣೆಗೆ ಭದ್ರವಾದ ಬುನಾದಿಯನ್ನೂ ಹಾಕಿಕೊಳ್ಳುತ್ತದೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಾಗದೆ ಹೋಗಿದೆ.
ಪೂರ್ತಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://youtu.be/LAqF6aVwjM0?si=hcUjuNx3_3WqrdOa
ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಪಕ್ಷದ ಒಳಗೆ ಪದೇಪದೆ ಕಾಣಿಸಿಕೊಂಡ ನಾಯಕತ್ವ ಬದಲಾವಣೆಯ ಗೊಂದಲಕ್ಕೆ, ಹೈಕಮಾಂಡ್ ಮಟ್ಟದಲ್ಲಿ ರೂಪಿಸಲಾಗಿದೆ ಎನ್ನಲಾದ ಸೂತ್ರದ ಬಗ್ಗೆ ಸ್ಪಷ್ಟನೆ ನೀಡದೆ, “ಮುಂದೆ ನೋಡೋಣ” ಎನ್ನುವ ನಿಲುವನ್ನೇ ಮುಂದುವರಿಸಿಕೊಂಡು ಬಂದಿರುವುದೇ ಇಂದಿನ ಈ ಗೋಜಲುಪೂರ್ಣ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಕಳೆದ ಎರಡು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ನಲ್ಲಿರುವ ನಾಯಕತ್ವದ ಗೊಂದಲಕ್ಕೆ ಅಂತ್ಯವೇ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್—ಇಬ್ಬರೂ ತಮ್ಮ ತಮ್ಮ ಸ್ಥಾನಗಳ ಬಗ್ಗೆ ಸ್ಪಷ್ಟತೆ ಬೇಕೆಂದು ಕಾಯುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಹೈಕಮಾಂಡ್ ನಾಯಕರು ಯಾವ ರೀತಿಯಲ್ಲಿ, ಯಾವ ಸಮಯದಲ್ಲಿ ಸ್ಪಷ್ಟನೆ ನೀಡಬೇಕು ಎಂಬುದರಲ್ಲೇ ಗೊಂದಲಕ್ಕೆ ಸಿಲುಕಿದ್ದಾರೆ. ಈ ಗೊಂದಲಕ್ಕೆ ಶಾಶ್ವತ ಪರಿಹಾರ ನೀಡುವ ಬದಲು, ಸಮಯವನ್ನು ದೂಡುವ ಮೂಲಕ ತಾತ್ಕಾಲಿಕ ಪರಿಹಾರಕ್ಕೆ ಇಡೀ ಪ್ರಕ್ರಿಯೆಯನ್ನು ಸೀಮಿತಗೊಳಿಸಲಾಗುತ್ತಿದೆಯೇ ಎಂಬ ಅನುಮಾನವೂ ಈಗ ರಾಜ್ಯ ರಾಜಕೀಯ ವಲಯದಲ್ಲಿ ಬಲವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಈ ಹಗ್ಗಜಗ್ಗಾಟದ ಬಗ್ಗೆ ಪಕ್ಷದ ಹೈಕಮಾಂಡ್ಗೆ ಅರಿವಿಲ್ಲ ಎಂದೇನಲ್ಲ. ಆದರೆ ಇಬ್ಬರಿಗೂ ಅಸಮಾಧಾನವಾಗದಂತೆ, ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕು ಎಂಬ ಮನಸ್ಥಿತಿಯಲ್ಲಿರುವ ಹೈಕಮಾಂಡ್, ಈ ಹಗ್ಗಜಗ್ಗಾಟಕ್ಕೆ ಸ್ಪಷ್ಟ ಪರಿಹಾರ ನೀಡುವಲ್ಲಿ ವಿಫಲವಾಗುತ್ತಿರುವುದು ಇದೀಗ ಬಹಿರಂಗ ಸತ್ಯವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಹೈಕಮಾಂಡ್ಗೆ ಈ ನಾಯಕತ್ವದ ಗೊಂದಲ ಇತ್ತು. ಆರಂಭದಲ್ಲಿ ಸಂಭವಿಸಬಹುದಾದ ರಾಜಕೀಯ ಹೊಡೆತವನ್ನು ತಪ್ಪಿಸಿಕೊಳ್ಳಲು ಒಂದು ಸೂತ್ರವನ್ನು ರೂಪಿಸಿ ಸರಕಾರ ರಚನೆಗೆ ಅವಕಾಶ ಮಾಡಿಕೊಡಲಾಯಿತು. ಆದರೆ ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಿದರೆ ಉಂಟಾಗಬಹುದಾದ ಅನಾಹುತಗಳ ಅರಿವು ಹೈಕಮಾಂಡ್ಗೆ ಚೆನ್ನಾಗಿ ಇದೆ.
ಅದರ ಪರಿಣಾಮವಾಗಿ, ಮುಖ್ಯಮಂತ್ರಿಯನ್ನು ಬದಲಾಯಿಸಬೇಕೆಂದರೂ ಅದು ಸಿದ್ದರಾಮಯ್ಯ ಅವರ ಸಹಮತದೊಂದಿಗೆ ಮಾತ್ರ ಸಾಧ್ಯ ಎನ್ನುವ ನಿಲುವಿನಲ್ಲಿ ಹೈಕಮಾಂಡ್ ಇದೆ. ಒಂದು ವೇಳೆ ಅದು ಸಾಧ್ಯವಾಗದೆ ಹೋದರೆ, ಸರಕಾರದ ಸ್ಥಿರತೆಯಷ್ಟೇ ಅಲ್ಲದೆ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆ ಎದುರಾಗಬಹುದು ಎಂಬ ಆತಂಕ ದೆಹಲಿ ನಾಯಕರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್, ಡಿ.ಕೆ.ಶಿವಕುಮಾರ್ ಅವರಿಗೆ ಸಿಗಬೇಕಾದ ನ್ಯಾಯಕ್ಕಿಂತಲೂ ಹೆಚ್ಚು ಪಕ್ಷದ ದೀರ್ಘಕಾಲೀನ ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದು ಸ್ಪಷ್ಟವಾಗಿದೆ.
ಅದೇ ಸಮಯದಲ್ಲಿ, ಡಿ.ಕೆ.ಶಿವಕುಮಾರ್ ಅವರನ್ನು ಹಾಗೂ ಅವರ ರಾಜಕೀಯ ಆಕಾಂಕ್ಷೆಯನ್ನು ಸಂಪೂರ್ಣವಾಗಿ ಬದಿಗಿಟ್ಟು ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲೂ ಹೈಕಮಾಂಡ್ ಇಲ್ಲ. ಆದ್ದರಿಂದ ಅಧಿಕಾರ ಹಸ್ತಾಂತರವಾಗಬೇಕು ಎನ್ನುವುದು ಎಷ್ಟು ನಿಜವೋ, ಆ ಅಧಿಕಾರ ವರ್ಗಾವಣೆಯ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ, ಸುಲಲಿತವಾಗಿ ಮುಗಿಯಬೇಕು ಎನ್ನುವುದೂ ಹೈಕಮಾಂಡ್ನ ಲೆಕ್ಕಾಚಾರವಾಗಿದೆ.
ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೈಕಮಾಂಡ್ ಎದುರಿಸುತ್ತಿರುವುದು ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಅರಿವಿರುವ ಕಾರಣ, ಅವರು ಸಮಯದೂಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ “ನಾನೇ ಐದು ವರ್ಷ ಮುಖ್ಯಮಂತ್ರಿ” ಎಂದು ನೇರವಾಗಿ ಹೇಳುತ್ತಿದ್ದ ಸಿದ್ದರಾಮಯ್ಯ, ಇತ್ತೀಚಿನ ದಿನಗಳಲ್ಲಿ “ಹೈಕಮಾಂಡ್ ತೀರ್ಮಾನಕ್ಕೆ ಬದ್ಧ” ಎನ್ನುವ ಪದಗಳನ್ನು ಹೆಚ್ಚು ಬಳಸುತ್ತಿರುವುದು ಈ ತಂತ್ರದ ಭಾಗವಾಗಿದೆ.
ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರು ಕೇಳಿದ “ಡಿಕೆ ಸಿಎಂ ಯಾವಾಗ?” ಎಂಬ ಪ್ರಶ್ನೆಗೆ, “ಹೈಕಮಾಂಡ್ ಹೇಳಿದಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ಎನ್ನುವ ಹೇಳಿಕೆಯಿಂದ ಒಂದು ಹೆಜ್ಜೆ ಹಿಂದೆ ಸರಿದಂತಾಯಿತು. ಆದರೆ ಈ ನಡುವೆ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತೆ ರಾಜ್ಯ ರಾಜಕೀಯದಲ್ಲಿ ಗೊಂದಲಕ್ಕೆ ಕಾರಣವಾಗಿವೆ.
ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಈ ಗೊಂದಲ ಜೀವಂತವಾಗಿರಬೇಕು ಎನ್ನುವುದು ಸಿದ್ದರಾಮಯ್ಯ ಅವರ ಆಪ್ತರ ಲೆಕ್ಕಾಚಾರವಾಗಿದೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಪರ-ವಿರೋಧ ಚರ್ಚೆಗಳು ಹೆಚ್ಚಾಗಿ ಗೊಂದಲ ಮತ್ತಷ್ಟು ಗಟ್ಟಿ ಆದಷ್ಟು, ಹೈಕಮಾಂಡ್ ಇಡೀ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಹಾಕಲಿದೆ ಎಂಬ ನಂಬಿಕೆ ಅವರಲ್ಲಿದೆ.
ಈ ಲೆಕ್ಕಾಚಾರ ಸರಿ ಹೋದರೆ, ಸಿದ್ದರಾಮಯ್ಯ ಅವರ ಕುರ್ಚಿ ಸದ್ಯಕ್ಕೆ ಸುರಕ್ಷಿತ ಎನ್ನುವುದು ಅವರಿಗೆ ತಿಳಿದಿದೆ. ಒಂದು ವೇಳೆ 2026ರ ಜನವರಿ ಎರಡನೇ ವಾರದವರೆಗೆ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮಟ್ಟದಲ್ಲಿ ಯಾವುದೇ ಮಹತ್ವದ ಸಭೆ ನಡೆಯದಿದ್ದರೆ, ಬಜೆಟ್ವರೆಗೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ಅಂದಾಜು ಕೂಡ ಇದೆ. ಅದರ ಬಳಿಕ ಕೇರಳ ವಿಧಾನಸಭಾ ಚುನಾವಣೆ ಎದುರಾಗುವುದರಿಂದ ಮುಂದಿನ ಜೂನ್ವರೆಗೆ ಇಡೀ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು ಎನ್ನುವುದು ಸಿದ್ದರಾಮಯ್ಯ ಹಾಗೂ ಅವರ ಆಪ್ತರ ಲೆಕ್ಕಾಚಾರವಾಗಿದೆ.
ಇದಕ್ಕೆ ಪೂರಕವಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಹುಲ್ ಗಾಂಧಿ ಅವರ ಅತ್ಯಾಪ್ತ ವಲಯದಲ್ಲಿರುವ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ “ಕೇರಳ ಚುನಾವಣೆ ಮುಗಿಯುವವರೆಗೂ ಏನೂ ಆಗಲು ಬಿಡುವುದಿಲ್ಲ, ನಾನಿದ್ದೇನೆ” ಎಂಬ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ, ಸರಕಾರ ಎರಡುವರೆ ವರ್ಷ ಪೂರೈಸುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬದಲಾವಣೆಯ ಕೂಗಿಗೆ ನಿರೀಕ್ಷೆಗೂ ಮೀರಿದ ವೇಗ ನೀಡಿದರು. ಬಿಹಾರ ಚುನಾವಣೆಯ ಹೀನಾಯ ಸೋಲು, ರಾಷ್ಟ್ರ ರಾಜಕಾರಣದಲ್ಲಿ ಹಿಂದುಳಿದ ವರ್ಗದ ನಾಯಕತ್ವದ ಪರ ಗಾಳಿ ಇದೆ ಎನ್ನುವ ಅಂದಾಜು—all ಇದ್ರ ನಡುವೆಯೂ ತಮ್ಮ ಆಪ್ತರನ್ನು ದೆಹಲಿಯಲ್ಲಿ ಪರೇಡ್ ಮಾಡುವಂತಹ ಹೊಸ ಪ್ರಯೋಗಕ್ಕೆ ಕೈ ಹಾಕಿದರು.
ಚುನಾವಣೆಯಲ್ಲಿ ಸೋಲಿನ ಹಂತದಲ್ಲಿರುವ ಸಮಯದಲ್ಲಿ, ಕರ್ನಾಟಕದಂತಹ ಪ್ರಮುಖ ರಾಜ್ಯದ ಮುಖ್ಯಮಂತ್ರಿ ಯನ್ನು—ಅದರಲ್ಲಿಯೂ ಅಹಿಂದ ನಾಯಕನನ್ನು—ಬದಲಾಯಿಸುವಷ್ಟು ದೊಡ್ಡ ರಿಸ್ಕ್ ಅನ್ನು ಹೈಕಮಾಂಡ್ ತೆಗೆದುಕೊಳ್ಳುವುದಿಲ್ಲ ಎನ್ನುವ ಸ್ಪಷ್ಟತೆ ಇದ್ದರೂ ಈ ಪ್ರಯೋಗ ನಡೆದಿದ್ದು ಹಲವರನ್ನು ಅಚ್ಚರಿಗೊಳಿಸಿತು. ಆದರೆ ಸಮಯ ಕಳೆಯುತ್ತಿದ್ದಂತೆ ತಮಗೇ ಡ್ಯಾಮೇಜ್ ಆಗಬಹುದು ಎಂಬ ಅರಿವಿನಿಂದಲೇ ಡಿ.ಕೆ.ಶಿವಕುಮಾರ್ ಈ ಅವಸರದ ಹೆಜ್ಜೆ ಇಟ್ಟಿದ್ದಾರೆ ಎಂಬ ವಿಶ್ಲೇಷಣೆ ಇದೆ.
ಏಕೆಂದರೆ, ಎರಡೂವರೆ ವರ್ಷ ಪೂರೈಸುವ ಸಮಯದಲ್ಲಿ ಮುಖ್ಯಮಂತ್ರಿಯಾಗದೆ, ಮೂರು ಅಥವಾ ಮೂರುವರೆ ವರ್ಷಗಳ ನಂತರ ಅಧಿಕಾರ ಹಿಡಿದರೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗುವುದು ಕಷ್ಟ. ಅದರಲ್ಲಿಯೂ 2026–27ನೇ ಸಾಲಿನ ಬಜೆಟ್ ಅನ್ನು ಸಿದ್ದರಾಮಯ್ಯ ಅವರೇ ಮಂಡಿಸಿದರೆ, ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ಣ ಪ್ರಮಾಣದಲ್ಲಿ ಮಂಡಿಸಲು ಸಿಗುವುದು ಒಂದೇ ಬಜೆಟ್ ಆಗುತ್ತದೆ.
ಚುನಾವಣೆ ಮುನ್ನ ಮಂಡಿಸುವ ಬಜೆಟ್ನಲ್ಲಿ ಯಾವುದೇ ದೊಡ್ಡ ಘೋಷಣೆ ಮಾಡುವ ಅವಕಾಶವೂ ಇರುವುದಿಲ್ಲ. ಜೊತೆಗೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗ ಆಡಳಿತ ವ್ಯವಸ್ಥೆ ರಾಜಕಾರಣಿಗಳು ನಿರೀಕ್ಷಿಸುವಷ್ಟು ಪೂರಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಅಧಿಕಾರಿಗಳೂ ಸಹ ಸಂಪೂರ್ಣ ಸಹಕಾರ ನೀಡದ ಸ್ಥಿತಿ ಉಂಟಾಗುತ್ತದೆ.
ಈ ಎಲ್ಲಾ ಲೆಕ್ಕಾಚಾರದಲ್ಲಿ, ಎರಡು ವರ್ಷಕ್ಕೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೂ, ಅದರಲ್ಲಿ ಒಂದೂವರೆ ವರ್ಷ ಮಾತ್ರ ಆಡಳಿತ ನಡೆಸುವ ಅವಕಾಶ ದೊರೆಯುತ್ತದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಸಹಜವಾಗಿ ಏಳುವ ಆಡಳಿತ ವಿರೋಧಿ ಅಲೆಗೆ ಡಿ.ಕೆ.ಶಿವಕುಮಾರ್ ತಾವೇ ಮುಖಾಮುಖಿಯಾಗಬೇಕಾಗುತ್ತದೆ.
ಈ ಎಲ್ಲಕ್ಕಿಂತ ಮಿಗಿಲಾಗಿ, ಸರಕಾರ ಎರಡುವರೆ ವರ್ಷ ಪೂರೈಸುವ ಹೊಸ್ತಿಲಲ್ಲೇ ಸಿದ್ದರಾಮಯ್ಯ ಅವರಿಂದ “ನಾನೇ ಐದು ವರ್ಷ ಮುಖ್ಯಮಂತ್ರಿ” ಎಂಬ ಹೇಳಿಕೆಗಳು ಕೇಳಿಬಂದಿದ್ದು, ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಗೊಂದಲ ಮತ್ತು ಅಸಮಾಧಾನ ಉಂಟುಮಾಡಿತ್ತು. ಇದೇ ಕಾರಣಕ್ಕೆ ಅವರು ಅವಸರದಲ್ಲೇ ತಮ್ಮ ರಾಜಕೀಯ ಕಾರ್ಡ್ ಅನ್ನು ಪ್ಲೇ ಮಾಡಿದರು.
ಈ ಎಲ್ಲಾ ಗೊಂದಲಗಳ ನಡುವೆಯೂ, ಹೈಕಮಾಂಡ್ ಕರ್ನಾಟಕದ ವಿಷಯದಲ್ಲಿ ಕಡ್ಡಿ ಮುರಿದಂತೆ ತೀರ್ಮಾನ ಕೈಗೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಕಾಂಗ್ರೆಸ್ ಪಾಲಿಗೆ ಉಳಿದಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕದಲ್ಲಿಯೂ ಗೊಂದಲ ಉಂಟಾಗಿ ಪಕ್ಷಕ್ಕೆ ಹಾನಿಯಾದರೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳ್ಳುವುದು ಅತ್ಯಂತ ಕಷ್ಟಕರವಾಗಲಿದೆ.
ಆದ್ದರಿಂದ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕ್ ಉಳಿಸಿಕೊಂಡು, ಜೊತೆಗೆ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಬಲವನ್ನು ಬಳಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಬೇಕಾದ ಅನಿವಾರ್ಯತೆ ಹೈಕಮಾಂಡ್ ಮುಂದೆ ಇದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಇಬ್ಬರಲ್ಲಿ ಯಾರಿಗಾದರೂ ಹೆಚ್ಚು ಒಲವು ತೋರಿಸಿದರೆ ಪಕ್ಷಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ. ಆ ಹೊಡೆತವನ್ನು ತಪ್ಪಿಸಿಕೊಳ್ಳಲು ಸಾಧ್ಯವಾದ ಏಕೈಕ ಮಾರ್ಗ ಸಮಯವನ್ನು ದೂಡುವುದೇ ಎನ್ನುವುದು ದೆಹಲಿ ನಾಯಕರ ಲೆಕ್ಕಾಚಾರವಾಗಿದೆ. ಅದಕ್ಕಾಗಿಯೇ ನಾಯಕತ್ವ ವಿಚಾರ ಚರ್ಚಿಸಲು ಬಯಸುವವರಿಗೆ ಸ್ಪಷ್ಟ ಸಮಯವೇ ನೀಡಲಾಗುತ್ತಿಲ್ಲ.
ಸ್ಪಷ್ಟನೆ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಸಮಾಲೋಚನೆಗೂ ಸಮಯ ಸಿಗುತ್ತಿಲ್ಲ. ಭಾನುವಾರ ನಡೆದ ಚುಟುಕು ಭೇಟಿಯೂ ಕೇವಲ ಒಂದೂವರೆ ನಿಮಿಷಕ್ಕೆ ಸೀಮಿತವಾಗಿದ್ದು, ಅಲ್ಲಿ ಕೂಡ “ವಿಲ್ ಸೋರ್ಟ್ ಇಟ್ ಔಟ್ ಶಾರ್ಟ್ಲಿ” ಎನ್ನುವ ಭರವಸೆ ಹೊರತುಪಡಿಸಿ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಇದರ ನಡುವೆ ರಾಹುಲ್ ಗಾಂಧಿ ಡಿಸೆಂಬರ್ 17ರಂದು ಜರ್ಮನಿ ಮತ್ತು ಇಟಲಿಗೆ ಪ್ರಯಾಣ ಕೈಗೊಂಡಿದ್ದು, 21ರಂದು ಹಿಂದಿರುಗಿ ಮತ್ತೆ 27ರಂದು ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. 21ರಿಂದ 27ರ ನಡುವಿನ ಅವಧಿಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಸಭೆ ನಡೆಯುವ ಸಾಧ್ಯತೆಯೂ ಕಡಿಮೆಯಾಗಿದೆ. ಏಕೆಂದರೆ ಕೆ.ಸಿ.ವೇಣುಗೋಪಾಲ್ ಸದನ ಸಮಿತಿಯ ನೆಪದಲ್ಲಿ ನಾಲ್ಕು ದಿನಗಳ ತಮಿಳುನಾಡು ಪ್ರವಾಸದಲ್ಲಿದ್ದಾರೆ.
ವೇಣುಗೋಪಾಲ್ ದೆಹಲಿಯಲ್ಲಿ ಇಲ್ಲದ ಸಮಯದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರ ಕೈಗೊಳ್ಳುವ ಸಭೆ ನಡೆಯುವುದು ಅನುಮಾನವೇ. ಹೀಗಾಗಿ ರಾಜ್ಯ ನಾಯಕರಿಗೆ ನಾಯಕತ್ವ ಬದಲಾವಣೆಯ ವಿಚಾರವಾಗಿ ರಾಹುಲ್ ಗಾಂಧಿಯನ್ನು ಭೇಟಿಯಾಗುವ ಅವಕಾಶ ಹೊಸ ವರ್ಷಕ್ಕೆ ಮುಂದೂಡಲ್ಪಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ನಡೆಯುತ್ತಿರುವ ಈ ನಾಯಕತ್ವದ ಗೊಂದಲವು ಕೇವಲ ಒಬ್ಬ ನಾಯಕ ಅಥವಾ ಉಪಮುಖ್ಯಮಂತ್ರಿ ನಡುವೆ ಸೀಮಿತವಾಗಿಲ್ಲ. ಕರ್ನಾಟಕದ ವಿವಿಧ ತಾಲೂಕುಗಳ ಮಟ್ಟದಲ್ಲಿ ಪಕ್ಷ ಕಾರ್ಯಕರ್ತರಿಂದ ಪ್ರಾರಂಭವಾಗಿರುವ ಚರ್ಚೆಗಳು ಮತ್ತು ಅಸಮಾಧಾನಗಳು, ಮಧ್ಯಮ ಹಾಗೂ ಹಿರಿಯ ಪದಾಧಿಕಾರಿಗಳ ನಡುವೆ ತಮ್ಮ ಹಿತಾಸಕ್ತಿಗಳಿಗಾಗಿ ನಡೆಯುತ್ತಿರುವ ಸಣ್ಣ–ಮಟ್ಟದ ರಾಜಕೀಯ ಸಂಘರ್ಷಕ್ಕೆ ದಾರಿ ಒರಟಾಗಿದೆ. ಈ ತಳಹದಿಯ ಅಸಮಾಧಾನಗಳು, ಹೈಕಮಾಂಡ್ ನಿರ್ಧಾರವಿಲ್ಲದ ಕಾರಣ ಉಂಟಾಗುತ್ತಿರುವ ಅನಿಶ್ಚಿತತೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿವೆ.
ಇನ್ನು, ಈ ಗೊಂದಲವು ಕೇವಲ ಪಕ್ಷದ ಒಳಗಿನ ವಿಷಯವಲ್ಲದೆ, ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ಮಹತ್ವದ ನಿರ್ಧಾರಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಿಗದಿತ ಕಾರ್ಯಕ್ರಮಗಳು, ಯೋಜನೆಗಳ ಅನುಷ್ಠಾನ, ಬಜೆಟ್ ಪ್ರಸ್ತಾವನೆ, ಮತ್ತು ಅಭಿವೃದ್ಧಿ ಯೋಜನೆಗಳ ವೇಳಾಪಟ್ಟಿಯಲ್ಲಿನ ವಿಳಂಬಗಳು, ಆಡಳಿತದ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತಿವೆ. ಸರ್ಕಾರದ ಗತಿ ನಿಧಾನವಾಗುತ್ತಿದ್ದು, ಸಾರ್ವಜನಿಕ ಭರವಸೆ, ಬಂಡವಾಳ ಹೂಡಿಕೆ, ಮತ್ತು ಸಾಮಾಜಿಕ ಉತ್ಸಾಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
ಇದೇ ವೇಳೆ, ರಾಜ್ಯ ರಾಜಕೀಯ ವಲಯದಲ್ಲಿ ಎದುರಾಗುವ ಪ್ರತಿದ್ವಂದ್ವಿ ಪಕ್ಷಗಳು ಈ ಗೊಂದಲವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಉಪಯೋಗಿಸುತ್ತಿವೆ. ಬಿಜೆಪಿ ಮತ್ತು ಇತರ ಪಕ್ಷಗಳು ಈ ವಿಚಾರವನ್ನು ಸಾರ್ವಜನಿಕ ಗಮನಕ್ಕೆ ತರಲು, ಪ್ರಚಂಡ ಪ್ರಚಾರ ಕಾರ್ಯಗಳನ್ನು ರೂಪಿಸುತ್ತಿದ್ದು, ತಮ್ಮ ಪಕ್ಷಕ್ಕೆ ರಾಜಕೀಯ ಲಾಭ ತರುವ ಪ್ರಯತ್ನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲೇ, ರಾಜ್ಯದ ಆಡಳಿತಕ್ಕೆ ನೇರವಾಗುವ ಪರಿಣಾಮ, ಮುಂದಿನ ಚುನಾವಣೆಯ ದೃಷ್ಟಿಯಿಂದ, ಕಾಂಗ್ರೆಸ್ ಪಕ್ಷದ ನಾಯಕತ್ವ ಮತ್ತು ಹೈಕಮಾಂಡ್ ನಿರ್ಧಾರಗಳ ಮಹತ್ವವನ್ನು ಮತ್ತಷ್ಟು ಹೈಲೈಟ್ ಮಾಡುತ್ತಿದೆ.
ಆದರೆ ಗೊಂದಲಕ್ಕೆ ತಾರ್ಕಿಕ ಅಂತ್ಯ ನೀಡದೇ ಸಮಯವನ್ನು ದೂಡುತ್ತಾ ಹೋದಷ್ಟು, ರಾಜ್ಯ ಕಾಂಗ್ರೆಸ್ನಲ್ಲಿ ಸ್ಪಷ್ಟತೆಯ ಕೊರತೆ ಹೆಚ್ಚಾಗುವುದು ಮತ್ತು ಪರಸ್ಪರ ವಿರುದ್ಧ ಹೇಳಿಕೆಗಳು ಹೆಚ್ಚಾಗುವುದು ಖಚಿತ. ಈ ಗೊಂದಲದಿಂದ ಉಂಟಾಗುವ ರಾಜಕೀಯ ಹಾನಿಯನ್ನು ಹೈಕಮಾಂಡ್ ಯಾವ ರೀತಿಯಲ್ಲಿ ಸರಿಪಡಿಸಲಿದೆ ಎಂಬುದೇ ಈಗ ಕಾಂಗ್ರೆಸ್ ಮುಂದೆ ನಿಂತಿರುವ ಅತಿದೊಡ್ಡ ಪ್ರಶ್ನೆಯಾಗಿದೆ.
“ಕರ್ನಾಟಕದ ರಾಜಕೀಯ ಹಗ್ಗಜಗ್ಗಾಟ ಇನ್ನೂ ಅಂತ್ಯ ಕಂಡಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ನಾಯಕತ್ವದ ಗೊಂದಲ, ಹೈಕಮಾಂಡ್ ನಿರ್ಧಾರಗಳ ತಾತ್ಕಾಲಿಕ ಸ್ಥಗಿತ, ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಬರುವ ಪರಿಣಾಮ—ಎಲ್ಲವೂ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ. ಈ ರಾಜಕೀಯ ಕಣಕಣದಲ್ಲಿ, ಪಕ್ಷದೊಳಗಿನ ಅಸಮಾಧಾನ, ಭವಿಷ್ಯದ ತೀರ್ಮಾನಗಳ ಮೇಲೆ ಸಾರ್ವಜನಿಕ ನಿರೀಕ್ಷೆ, ಹಾಗೂ ಆಡಳಿತದ ಗತಿಗೆ ಇರಬಹುದಾದ ಪರಿಣಾಮಗಳು ಎಲ್ಲರೂ ಗಮನದಲ್ಲಿರಿಸಬೇಕಾದ ಅಂಶಗಳಾಗಿವೆ. ಹೀಗಾಗಿ, ಕರ್ನಾಟಕದ ಭವಿಷ್ಯ ಯಾವ ದಿಕ್ಕಿಗೆ ಹೋಗಲಿದೆ ಎಂಬ ಪ್ರಶ್ನೆ, ಈ ಗೊಂದಲದ ತೀರ್ಮಾನದ ಮೇಲೆ ನೇರವಾಗಿ ಅವಲಂಬಿತವಾಗಿದೆ. ಈಗ ಎಲ್ಲರಿಗೂ ಗಮನವಿಟ್ಟು ನೋಡಲೇಬೇಕಾಗಿರುವ ಸಮಯ ಇದು, ಏಕೆಂದರೆ ಮುಂದಿನ ನಿರ್ಧಾರವೇ ರಾಜ್ಯದ ರಾಜಕೀಯ ನಕ್ಷೆಯನ್ನು ರೂಪಿಸುವುದು ನಿಶ್ಚಿತ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




