Saturday, October 25, 2025

Latest Posts

ಸ್ನಾನಕ್ಕೆ ಹೋಗಿ ಸಾವಿನಲ್ಲೂ ಒಂದಾದ ಸಹೋದರಿಯರು!

- Advertisement -

ಪಿರಿಯಾಪಟ್ಟಣದಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನೂ ಕಳವಳಗೊಳಿಸಿದೆ. ಗ್ಯಾಸ್ ಗೀಸರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದ ಇಬ್ಬರು ಸಹೋದರಿಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದ ಜೋನಿಗರಿ ಬೀದಿಯಲ್ಲಿ ವಾಸಿಸುತ್ತಿದ್ದ ಬೆಟ್ಟದಪುರ ಮೂಲದ ಅಲ್ತಾಫ್ ಪಾಷಾ ಅವರ ಮಕ್ಕಳು, 23 ವರ್ಷದ ಗುಲ್ಬಮ್ ಮತ್ತು 21 ವರ್ಷದ ಸಿಮ್ರಾನ್ ತಾಜ್ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಗುರುವಾರ ಸಂಜೆ ಇಬ್ಬರೂ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದರು. ಗ್ಯಾಸ್ ಗೀಸರ್ ಆನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದರಿಂದ ಹೊರಬಂದ ವಿಷಾನಿಲ ಉಸಿರಾಟದ ತೊಂದರೆ ಉಂಟುಮಾಡಿ ಇಬ್ಬರೂ ಅಸ್ವಸ್ಥರಾಗಿ ಬಾತ್ರೂಮ್‌ನಲ್ಲೇ ಕುಸಿದು ಬಿದ್ದರು. ಹೆಚ್ಚು ಹೊತ್ತು ಹೊರಗೆ ಬಾರದಿದ್ದರಿಂದ ಕುಟುಂಬಸ್ಥರು ಒಳಗೆ ಹೋಗಿ ನೋಡಿದಾಗ ಇಬ್ಬರೂ ಅಚೇತನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆಂದು ದೃಢಪಡಿಸಿದರು.

ಶುಕ್ರವಾರ ಬೆಳಿಗ್ಗೆ ಪಿರಿಯಾಪಟ್ಟಣ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಬೆಟ್ಟದಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ವೈದ್ಯ ಡಾ. ಪ್ರಮೋದ್ ಕುಮಾರ್ ಅವರು, ಯುವತಿಯರು ಕಾರ್ಬನ್ ಮೋನಾಕ್ಸೈಡ್ ವಿಷದಿಂದ ಮೃತಪಟ್ಟಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ. ಗ್ಯಾಸ್ ಗೀಸರ್ ಬಳಸುವಾಗ ವಾತಾವರಣ ಸರಿ ರೀತಿಯಲ್ಲಿ ಹಾದು ಹೋಗುವ ವ್ಯವಸ್ಥೆ ಇರಬೇಕು. ವೆಂಟಿಲೇಶನ್ ಇಲ್ಲದ ಕಡೆಗಳಲ್ಲಿ ಬಳಸುವುದು ಅಪಾಯಕರ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss