ಧರ್ಮಸ್ಥಳದ ಆರೋಪ ಪ್ರಕರಣದಲ್ಲಿ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಪ್ರಣವ್ ಮೊಹಂತಿ ನೇತೃತ್ವದ SIT ತಂಡಕ್ಕೆ ತನಿಖೆಯ ಹೊಣೆ ನೀಡಲಾಗಿದೆ. ಕರ್ನಾಟಕ ಟಿವಿಗೆ ರಾಜ್ಯ ಸರ್ಕಾರ SIT ತನಿಖೆಗೆ ಆದೇಶಿಸಿರುವ ಪತ್ರ ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ, ಕಲಂ 211(ಎ), ಬಿ.ಎನ್.ಎಸ್ ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಈ ಸಂಬಂಧ ಇತರೆ ಠಾಣೆಗಳಲ್ಲಿ ದಾಖಲಾಗಬಹುದಾದ, ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೂಡ ಪತ್ರ ಬರೆದಿತ್ತು. ಧರ್ಮಸ್ಥಳದ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ, ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಜುಲೈ 12ರಂದು ಮನುಷ್ಯರೊಬ್ಬರ ತಲೆಬುರುಡೆ ದೊರಕಿದ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆ ವರದಿ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.
ಜೊತೆಗೆ ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ, ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ನಡೆದಿರುವ ಬಗ್ಗೆ ಹೇಳಲಾಗಿತ್ತು. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ, ಮಹಿಳಾ ಆಯೋಗ ಮನವಿ ಮಾಡಿತ್ತು.
ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ಕೈಗೊಳ್ಳಲು, ಒಂದು ವಿಶೇಷ ತನಿಖಾ ತಂಡ ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಆದೇಶಿಸಿದೆ. ಪ್ರಣವ್ ಮೊಹಂತಿ ನೇತೃತ್ವದ ತಂಡಕ್ಕೆ, ಧರ್ಮಸ್ಥಳದ ಪ್ರಕರಣಗಳ ತನಿಖೆಯ ಹೊಣೆ ನೀಡಲಾಗಿದೆ. ಮತ್ತು ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.